ಕೊಡುಗು: ನಡುರಸ್ತೆಯಲ್ಲಿ ಕಾಡಾನೆಯೊಂದು ರಾಜಾರೋಷವಾಗಿ ಸಂಚಾರ ಮಾಡಿ, ಕೆಲಕಾಲ ಭಯ ಉಂಟು ಮಾಡಿದ ಘಟನೆ ಕೊಡಗಿನ ತಿತಿಮತಿ ಪ್ರದೇಶದಲ್ಲಿ ಬುಧವಾರ ನಡೆದಿದೆ. ಕಾಡಾನೆ ಅರಣ್ಯ ಇಲಾಖೆಯ ಕಚೇರಿಯ ಬಳಿಗೂ ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಸಿದ್ದಾಪುರ ಬಳಿಯ ತಿತಿಮತಿ ಸಮೀಪದ ಕಾಫಿ ತೋಟದಲ್ಲಿ ಬೀಡುಬಿಟ್ಟ ಆನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಕಾಡಾನೆ ಗುಂಪಿನಲ್ಲಿದ್ದ ಆನೆಯೊಂದು ನೇರವಾಗಿ ಅರಣ್ಯ ಇಲಾಖೆಯ ಕಚೇರಿ ಮುಂದೆ ಬಂದು ನಿಲ್ಲಿಸಿದ್ದ ವಾಹನವನ್ನು ಜಖಂ ಮಾಡಲು ಯತ್ನಿಸಿದೆ.
ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಓಡಿಸಲು ಮುಂದಾದಾಗ ಗಲಿಬಿಲಿಗೊಂಡು ತಿತಿಮತಿ ಪ್ರದೇಶದ ಮುಖ್ಯರಸ್ತೆಗೆ ನುಗ್ಗಿದೆ. ಆನೆ ಕಂಡ ವಾಹನ ಸವಾರರು ದಿಕ್ಕಾಪಾಲಾಗಿ ಓಡಿದ್ದಾರೆ. ಕೊನೆಗೂ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಂಬಾಲಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸೇರಿಸಿದ್ದಾರೆ.
ಮಡಿಕೇರಿಯ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಆಹಾರ ಅರಸಿ ಕಾಫೀ ತೋಟಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ. ಈ ಕಾಡಾನೆಗಳ ಹಾವಳಿಯನ್ನು ತಡೆಯುವುದು ಇಲ್ಲಿಯ ಅರಣ್ಯ ಇಲಾಖೆಗೆ ಸವಾಲಾಗಿದೆ.
ಇದನ್ನೂ ಓದಿ: 300 ವರ್ಷಗಳ ಹಿಂದೆ ನೆಲಸಮವಾಗಿದ್ದ ದೈವಸ್ಥಾನ ಒಂದೇ ವರ್ಷದಲ್ಲಿ ನಿರ್ಮಾಣ; ವಾಜಿಲ್ಲಾಯ ದೈವದ ಮಹಿಮೆ!