ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಪಟ್ಟಣ, ಅಡಕೆ ನಾಡು ಚನ್ನಗಿರಿ ಜನರ ನೂತನ ರೈಲು ಮಾರ್ಗ ಕನಸು ನನಸಾಗುವುದೇ? ಹೀಗೊಂದು ಬಹುದಿನದ ಯೋಜನೆಗಾಗಿ ಚನ್ನಗಿರಿ ಕಾಯುತ್ತಿದ್ದು, ಈ ಭಾಗಕ್ಕೆ ರೈಲು ಮಾರ್ಗ ಲಭಿಸಿದರೆ ಇಲ್ಲಿಯ ಜನರಿಗೆ ತುಂಬಾ ಅನುಕೂಲವಾಗಲಿದೆ. ಪಕ್ಕದ ಜಿಲ್ಲೆ ಶಿವಮೊಗ್ಗ ವಿಎಸ್ಎಲ್ ಫ್ಯಾಕ್ಟರಿ ಆರಂಭವಾದರೆ ಈ ಮಾರ್ಗ ಅತ್ಯವಶ್ಯಕ. ಭದ್ರಾವತಿ, ಚನ್ನಗಿರಿ, ಚಿಕ್ಕಜಾಜೂರು ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದ ಪ್ರಸ್ತಾವವೊಂದು ಈಗಾಗಲೇ ಕೇಂದ್ರದ ಮುಂದಿದ್ದು, ಬರುವ 2025ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಈ ನೂತನ ಮಾರ್ಗಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಈ ಚನ್ನಗಿರಿ ಜನ.
ಚನ್ನಗಿರಿ ಕೇವಲ ವಾಣಿಜ್ಯ ಪಟ್ಟಣ ಮಾತ್ರವಲ್ಲ, ಪ್ರವಾಸ್ಯೋದ್ಯಮ ಕ್ಷೇತ್ರವೂ ಹೌದು. ಇಲ್ಲಿ ಬೆಳೆಯುವ ಮೆಕ್ಕೆಜೋಳ, ಕಾಪ್ಕಾರ್ನ್, ಅಡಕೆ ಇಲ್ಲಿಂದಲೇ ದೇಶಾದಂತ್ಯ ರವಾನೆ ಆಗುತ್ತದೆ. ಮೆಕ್ಕೆಜೋಳ, ಅಡಕೆ ಬೆಳೆಯಿಂದ ರಾಷ್ಟ್ರವ್ಯಾಪಿ ಗುರುತಿಸಿಕೊಂಡಿರುವ ಚನ್ನಗಿರಿಗೆ ಈ ರೈಲು ಮಾರ್ಗ ಅವಶ್ಯಕವಾಗಿದೆ. ರೈಲ್ವೆ ಮಾರ್ಗವಾದರೆ ಜನರ ಓಡಾಟಕ್ಕೂ ಅನುಕೂಲ. ಭದ್ರಾವತಿಯ ವಿಎಸ್ಎಲ್ ಫ್ಯಾಕ್ಟರಿ ಆರಂಭಗೊಂಡರೆ ಐರನ್, ಸ್ಟೀಲ್, ರಫ್ತಿಗೂ ಸಹಕಾರಿ ಆಗಲಿದೆ. ಶಿವಮೊಗ್ಗ ರೈಲು ನಿಲ್ದಾಣದಿಂದ ಭದ್ರಾವತಿ, ಚನ್ನಗಿರಿ, ಚಿಕ್ಕಜಾಜೂರು ಜಂಕ್ಷನ್‌ಗೆ ಸಂಪರ್ಕಿಸುವ ಮಾರ್ಗದ ಪ್ರಸ್ತಾಪ ಈಗಾಗಲೇ ಕೇಂದ್ರ ಸರ್ಕಾರದ ಮುಂದಿದ್ದು, ಈ ಪ್ರಸ್ತಾಪಕ್ಕೆ ಗ್ರೀನ್ ಸಿಕ್ಕರೆ ಚನ್ನಗಿರಿ ಜನರಿಗೆ ಖುಷಿಯಾಗಲಿದೆ. ಅಡಕೆ ಬೆಳೆ ಒಂದರಿಂದಲೇ ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಈ ಭಾಗಕ್ಕೆ ರೈಲು ಮಾರ್ಗ ಚನ್ನಗಿರಿ ಜನರ ಬಹುದಿನದ ಕನಸಾಗಿದೆ. ಈ ಸಾಲಿನ ಕೇಂದ್ರ ಬಜೆಟ್ನಲ್ಲಿ ಈ ಮಾರ್ಗ ಒಪ್ಪಿಗೆಯಾದಲ್ಲಿ ಚನ್ನಗಿರಿ ಜನರಿಗೂ ದೇಶದ ಮೂಲೆಮೂಲೆ ಸುತ್ತುವ, ನಾನಾ ಪ್ರದೇಶಕ್ಕೂ ಸಂಚರಿಸುವ ಕನಸು ನನಸಾಗಲಿದೆ. ಇದರಿಂದ ಪ್ರವಾಸೋದ್ಯಮ ಕೂಡ ಹಂತ ಹಂತವಾಗಿ ಬೆಳೆಯಬಹುದು ಅನ್ನೋದು ಸ್ಥಳೀಯರ ಲೆಕ್ಕಾಚಾರವಾಗಿದೆ.
64 ಕಿ.ಮೀ ರೈಲು ಮಾರ್ಗ : ನೆರೆಯ ಜಿಲ್ಲೆ ಶಿವಮೊಗ್ಗದಿಂದ ವಯಾ ಚನ್ನಗಿರಿ ಮಾರ್ಗವಾಗಿ ಹೊಳಲ್ಕೆರೆವರೆಗೂ ಕೇವಲ 65 ಕಿ.ಮೀ ನೂತನ ರೈಲು ಮಾರ್ಗ ಜೋಡಿಸಿದರೆ, ದೇಶದ ದಶ ದಿಕ್ಕುಗಳಿಗೂ ಸಂಪರ್ಕ ಸಿಗಲಿದೆ. ಈ ರೈಲು ಮಾರ್ಗ ಸಿದ್ಧವಾದರೆ ಚಿತ್ರದುರ್ಗ ಜಿಲ್ಲೆಯ, ಚಿಕ್ಕಜಾಜೂರು, ಚಿತ್ರದುರ್ಗದ ಕೇಂದ್ರ ರೈಲ್ವೆ ನಿಲ್ದಾಣ, ಚಳ್ಳಕೆರೆ ಮೂಲಕ ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೂ ಸಂಪರ್ಕ ಸಿಗಲಿದೆ. ಅಲ್ಲದೆ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮೂಲಕ ಉತ್ತರ ಭಾರತಕ್ಕೂ ಸಂಪರ್ಕ ಸುಲಭ ಆಗಲಿದೆ. ಇತ್ತ ಹಾಸನ, ಮಂಗಳೂರು ಮಾರ್ಗವಾಗಿ ಕೇರಳ, ಕೊಂಕಣಿ ರೈಲು ಮಾರ್ಗ ಸೇರಿ ದಕ್ಷಿಣ ಭಾರತಕ್ಕೂ ಸಂಪರ್ಕ ಸಿಗಲಿದೆ. ಕೇವಲ 65 ಕಿ.ಮೀ ನೂತನ ಹಳಿ ಹಾಕಿದರೆ ಬಹುದೊಡ್ಡ ರೈಲು ಜಾಲ ಹೆಣೆಯಬಹುದಾಗಿದೆ ಎಂಬುದು ಚನ್ನಗಿರಿ ತಾಲೂಕಿನ ಜನರ ಲೆಕ್ಕಾಚಾರ.
ಈ ರೈಲು ಮಾರ್ಗದಿಂದ ವ್ಯವಹಾರಕ್ಕೂ ಆಸರೆ : ಚನ್ನಗಿರಿಯ ತುಮ್‌ಕೋಸ್ ಸಂಸ್ಥೆ ಹಾಗೂ ಶಿವಮೊಗ್ಗದ ಮ್ಯಾಮ್ಕೋಸ್ ನಂತಹ ದೊಡ್ಡ ದೊಡ್ಡ ಅಡಕೆ ಸಂಸ್ಥೆಗಳು ಉತ್ತರ ಭಾರತದ ರಾಜ್ಯಗಳೊಂದಿಗೆ ಸಂಪರ್ಕ ಸಾಧಿಸಿವೆ. ಈ ಎರಡೂ ಸಂಸ್ಥೆಗಳು ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದು ಈ ಅಡಿಕೆ ರಫ್ತಿಗೆ ಈ ರೈಲ್ವೆ ಮಾರ್ಗ ಅನುಕೂಲರ ಆಗಲಿದೆ. ಅಲ್ಲದೆ, ಪಾಪ್‌ಕಾರ್ನ್ ಮೆಕ್ಕೆಜೋಳ ರಫ್ತಿಗೆ, ಜನರನ್ನು ಹೊತ್ತು ಸಾಗುವ ಕೇವಲ ಪ್ಯಾಸೆಂಜರ್ ರೈಲು ಮಾತ್ರವಲ್ಲದೇ ಗೂಡ್ಸ್ ರೈಲು ಓಡಿಸಿ ಈ ಮಾರ್ಗವನ್ನು ಆರ್ಥಿಕವಾಗಿ ಲಾಭದಾಯಕ ಮಾಡಿಕೊಳ್ಳುವ ಅವಕಾಶವಿದೆ. ಜತೆಗೆ ಶಿವಮೊಗ್ಗ, ಚನ್ನಗಿರಿ ಎಂಬ ಅಡಕೆ ನಾಡುಗಳನ್ನು ದೇಶದ ಇತರೆ ರಾಜ್ಯಗಳ ಜತೆ ಬೆಸೆಯಬಹುದು. ಮೆಕ್ಕೆಜೋಳ, ಅಡಕೆ ವ್ಯವಹಾರ ಮಾಡುವ ಚನ್ನಗಿರಿ ಜನರು ಇದರ ಜೊತೆ ಬೇರೆ ಬೇರೆ ಸಾಕಷ್ಟು ವ್ಯವಹಾರಗಳನ್ನು ಮಾಡುತ್ತಿದ್ದು, ದಿಲ್ಲಿ, ಮುಂಬೈಗೆ ಮತ್ತು ಬೆಂಗಳೂರಿಗೆ ಹೋಗಲು ಸಾಕಷ್ಟು ಹರಸಾಹಸ ಮಾಡಬೇಕು. ರೈಲು ವ್ಯವಸ್ಥೆ ಇದ್ದರೆ ಸಂಪರ್ಕಕ್ಕೆ ಅನುಕೂಲ ಆಗಲಿದೆ. ಚನ್ನಗಿರಿ ಪಟ್ಟಣವು ಮಧ್ಯ ಕರ್ನಾಟಕದ ಕೇಂದ್ರವಾಗಿದ್ದು ಸಾಕಷ್ಟು ವ್ಯಾಪಾರ ವಹಿವಾಟು ನಡೆಸುತ್ತಾ ಬಂದಿದೆ. ಈ ಭಾಗದಲ್ಲಿ ರೈಲು ಸಂಚರಿಸಿದರೆ ಜನರಿಗೆ ಸಾಕಷ್ಟು ಅನುಕೂಲ ಅನ್ನೋದು ಇವರ ಇಲ್ಲಿನ ಜನರ ಅನಿಸಿಕೆ.
ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ಹೇಳಿದ್ದಿಷ್ಟು: ಈ ಬಗ್ಗೆ ಈಟಿವಿ ಭಾರತದ ಜೊತೆ ದೂರವಾಣಿ ಕರೆಯಲ್ಲಿ ಪ್ರತಿಕ್ರಿಯಿಸಿರುವ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್, "ಚನ್ನಗಿರಿ ಜನ ಸ್ವಾತಂತ್ರ್ಯ ಪೂರ್ವದಿಂದಲೂ ರೈಲು ನೋಡೇ ಇಲ್ಲ, ಅಲ್ಲಿನ ಜನಕ್ಕೆ ರೈಲು ಅತ್ಯವಶ್ಯಕವಾಗಿದೆ. ಶಿವಮೊಗ್ಗ ರೈಲು ನಿಲ್ದಾಣದಿಂದ ಭದ್ರಾವತಿ, ಚನ್ನಗಿರಿ, ಚಿಕ್ಕಜಾಜೂರು ಜಂಕ್ಷನ್‌ಗೆ ಸಂಪರ್ಕಿಸುವ ಮಾರ್ಗದ ಪ್ರಸ್ತಾಪ ಸರ್ಕಾರದ ಮುಂದಿದೆ. ಸುತ್ತ ನೀರಾವರಿ ಜಮೀನಿರುವ ಕಾರಣ ರೈಲ್ವೆ ಹಳಿ ನಿರ್ಮಿಸಲು ಜಮೀನು ಸಿಗುವುದು ಸಲುಭದ ವಿಷಯವಲ್ಲ, ರೈಲ್ವೆ ಹಳಿ ನಿರ್ಮಿಸಲು ಬೆದ್ದಲು ಜಮೀನು ಬಳಕೆ ಮಾಡಿದ್ರೆ ಉಪಯುಕ್ತ. ಈ ಮಾರ್ಗ ನಿರ್ಮಾಣ ಮಾಡಿದರೆ, ಭದ್ರಾವತಿಯ ವಿಎಸ್ಎಲ್ ಫ್ಯಾಕ್ಟರಿ ಆರಂಭವಾದರೆ ಐರನ್, ಸ್ಟೀಲ್ ರಫ್ತಿಗೆ ಸಹಕಾರಿಯಾಗಲಿದೆ. ಅಲ್ಲದೆ ಈ ಮಾರ್ಗ ಉದಯವಾಗುವುದರಿಂದ ಕಮರ್ಷಿಯಲ್ ಮಟ್ಟ ಹಾಗೂ ಜನರ ಪ್ರಯಾಣ, ಪ್ರವಾಸೋದ್ಯಮ ಕೂಡ ಬೆಳೆಯುತ್ತದೆ" ಎಂದರು.