ಮೈಸೂರು: ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯ ಕತ್ತು ಕೊಯ್ದು ಕೊಲೆ ಮಾಡಿ, ವಾಮಾಚಾರಕ್ಕಾಗಿ ನಡೆದ ಕೊಲೆ ಎಂದು ಬಿಂಬಿಸಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಕೊಲೆಯಾದ ಸದಾಶಿವ ಅವರ ಪತ್ನಿ ಸೇರಿ ಮೂವರನ್ನು ಬಂಧಿಸಲಾಗಿದೆ. ಮಲ್ಕುಂಡಿ ಗ್ರಾಮದ ರಾಜೇಶ್ವರಿ( 35), ಶಿವಯ್ಯ (33), ರಂಗಸ್ವಾಮಿ (38) ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ:ಅಕ್ಟೋಬರ್ 18ರಂದು ಬೆಳಗ್ಗೆ ಮಡುವಿನಹಳ್ಳಿ ಗ್ರಾಮದ ಸ್ಮಶಾನಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಮಲ್ಕುಂಡಿ ಗ್ರಾಮದ ಸದಾಶಿವ ಕತ್ತು ಕೊಯ್ದ ಸ್ಥಿತಿಯಲ್ಲಿ ನರಳಾಡುತ್ತಿದ್ದ ದೃಶ್ಯ ಸ್ಥಳೀಯರೊಬ್ಬರ ಕಣ್ಣಿಗೆ ಬಿದ್ದಿತ್ತು. ತಕ್ಷಣ ಅವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಪಿಎಸ್ಐ ಚೇತನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ನರಳಾಡುತ್ತಿದ್ದ ಸದಾಶಿವನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಮಾರ್ಗಮಧ್ಯೆ ಸದಾಶಿವ ಮೃತಪಟ್ಟಿದ್ದರು.
ಘಟನಾ ಸ್ಥಳದಲ್ಲಿ ಅರಿಶಿಣ - ಕುಂಕುಮ, ವೀಳ್ಯದೆಲೆ ಹಾಗೂ 101 ರೂ. ಇಟ್ಟು ವಾಮಾಚಾರಕ್ಕೆ ಬಲಿ ಕೊಟ್ಟಿರುವ ರೀತಿಯಲ್ಲಿ ಬಿಂಬಿಸಲಾಗಿತ್ತು. ಈ ಸಂಬಂಧ ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಎಎಸ್ಪಿ ನಾಗೇಶ್ ನೇತೃತ್ವದಲ್ಲಿ ಡಿವೈಎಸ್ಪಿ ರಘು, ಪಿಎಸ್ಐ ಚೇತನ್ ಕುಮಾರ್ ಸೇರಿದಂತೆ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.