ಡಿ.ಕೆ.ಶಿವಕುಮಾರ್ (Etv Bharat) ಬೆಂಗಳೂರು:ಹಾಸನ ಪೆನ್ ಡ್ರೈವ್ ಪ್ರಕರಣದ ಹಿಂದೆ ಕುಟುಂಬದ ಆಂತರಿಕ ಕಲಹ ಇದೆ ಎಂದು ವರದಿಯಾಗಿದೆ. ಈ ಪ್ರಕರಣ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ತಮ್ಮ ನಿಲುವು ಯಾಕೆ ಬದಲಿಸಿದ್ದಾರೆ?. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದ್ದು ಯಾರು? ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 7ರ ಬಳಿಕ ದಾಖಲೆ ಬಿಡುಗಡೆ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ''ಸಮಯ ಯಾಕೆ ವ್ಯರ್ಥ್ಯ ಮಾಡುತ್ತೀರಿ?. ಮೇ 7ರ ವರೆಗೆ ಕಾಯುವುದು ಬೇಡ. ಅದೇನು ಇದೆ ಅಂತಾ ಈಗಲೇ ಹೇಳಿ. ನಾವು ಬಿಚ್ಚಬೇಕಾ?, ಇದಕ್ಕೆ ಕಾರಣ ಯಾರು?. ಇದರ ಹಿಂದೆ ಯಾರಿದ್ದಾರೆ, ಮುಂದೆ ಯಾರಿದ್ದಾರೆ?. ಎಲ್ಲವೂ ಕೂಡ ಗೊತ್ತಾಗುತ್ತೆ'' ಎಂದು ತಿಳಿಸಿದರು.
ಮುಂದುವರೆದು, ''ಉಪ್ಪು ತಿಂದವರು ನೀರು ಕುಡಿಬೇಕು ಎಂದು ಹೇಳಿದ್ದು ಯಾರು?. ಅವರು (ರೇವಣ್ಣ) ಕುಟುಂಬನೇ ಬೇರೆ, ನಮ್ಮ ಕುಟುಂಬನೇ ಬೇರೆ ಎಂದು ಹೇಳಿದ್ದರು. ಅವರಿಗೆ ಟಿಕೆಟ್ ಕೊಡಬಾರದು, ನಮ್ಮ ಕುಟುಂಬದಲ್ಲಿ ಯಾರನ್ನೂ ಚುನಾವಣೆಗೆ ನಿಲ್ಲಿಸಲ್ಲ ಅಂತಾ ಹೇಳಿದ್ದರು. ತಪ್ಪಾಯ್ತು ಕ್ಷಮಿಸಿ ಎಂದು ಹೇಳಿದ್ದರು. ಕ್ಷಮಿಸಿ ಎಂದು ಕೇಳಿದ್ದರು?'' ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು. ಇದೇ ವೇಳೆ, ಹೆಚ್.ಡಿ. ರೇವಣ್ಣ ನಾಪತ್ತೆ ವಿಚಾರವಾಗಿ ಡಿಕೆಶಿ, ''ಇದಕ್ಕೆ ಗೃಹ ಸಚಿವರು, ಎಸ್ಐಟಿ ಇದೆ. ಅವರೇ ಉತ್ತರ ಕೊಡುತ್ತಾರೆ'' ಎಂದಷ್ಟೇ ಪ್ರತಿಕ್ರಿಯಿಸಿದರು.
ಒಕ್ಕಲಿಗ ನಾಯಕತ್ವ ಬೇಡ:ಇದೇ ವೇಳೆ, ಒಕ್ಕಲಿಗ ನಾಯಕತ್ವಕ್ಕಾಗಿ ಇಂತಹ ಘಟನೆಗಳು ಹೊರಗಡೆ ಬಂದಿವೆ ಎಂಬ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಡಿಕೆಶಿ, 'ಇಂತಹದ್ದನ್ನೆಲ್ಲ ಬಿಜೆಪಿಯವರು ಸೃಷ್ಟಿ ಮಾಡುತ್ತಿದ್ದಾರೆ. ನನಗೆ ಯಾವ ನಾಯಕತ್ವ ಬೇಡ. ಕಾಂಗ್ರೆಸ್ ನಾಯಕನಾಗಿ ಪಕ್ಷ ನನ್ನನ್ನು 4 ವರ್ಷದಿಂದ ಆಯ್ಕೆ ಮಾಡಿದೆ. ನಾನು ಪಕ್ಷದ ಒಬ್ಬ ಅಧ್ಯಕ್ಷ. ಬಿಜೆಪಿ, ಜೆಡಿಎಸ್ನವರು ಗಂಟೆಗೊಂದು ಗಳಿಗೆಗೊಂದು ಮಾತನಾಡುತ್ತಾರೆ. ಆದರೆ, ನಾನು ಒಕ್ಕಲಿಗ ನಾಯಕ ಅಂತಾ ಹೇಳಿಸಿಕೊಳ್ಳಲು ಇಷ್ಟ ಇಲ್ಲ. ನಾನು ಒಕ್ಕಲಿಗನಾಗಿ ಹುಟ್ಟಿದ್ದೇನೆ. ಆ ಸಮಾಜಕ್ಕೆ ಗೌರವ, ರಕ್ಷಣೆ ಕೊಡಬೇಕು. ಸಹಾಯ ಮಾಡಬೇಕು. ಜನರೂ ನನ್ನಿಂದು ನಿರೀಕ್ಷೆ ಮಾಡುತ್ತಾರೆ. ಜನರ ಸ್ವಾಭಿಮಾನ, ಗೌರವ ಉಳಿಸಲು ಏನು ಬೇಕೋ ಅದನ್ನು ನಾನು ಮಾಡುತ್ತೇನೆ. ಅದು ನನ್ನ ಧರ್ಮ ಎಂದು ಸ್ಪಷ್ಟಪಡಿಸಿದರು.
2ನೇ ಹಂತದಲ್ಲಿ 12 ಸ್ಥಾನ ಗೆಲುವು: ಕಾಂಗ್ರೆಸ್ ಗ್ಯಾರಂಟಿ, ಸರ್ಕಾರದ ಕೆಲಸ ಜನರಲ್ಲಿ ಮೆಚ್ಚುಗೆ ಇದೆ. ಕಾಂಗ್ರೆಸ್ ಗಾಳಿ ಇದೆ, ಕಾಂಗ್ರೆಸ್ ಗ್ಯಾರಂಟಿ ಗಾಳಿ ಇದೆ. ಜಿಲ್ಲಾ ಮಟ್ಟದ ದೊಡ್ಡ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ. ಒಳ್ಳೆ ವಾತಾವರಣ ಇದೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವಿನ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕದ ಎಲ್ಲ 5 ಕ್ಷೇತ್ರಗಳು ಸೇರಿ ಎರಡನೇ ಹಂತದ 14 ಕ್ಷೇತ್ರಗಳ ಪೈಕಿ 12 ಕಡೆ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಇದೆ ಎಂದು ಡಿಕೆಶಿ ತಿಳಿಸಿದರು.
ಮಳೆ ಬಂದರೆ ಒಂದು ದಿನಕ್ಕೆ ಸಾವಿರ ಕೋಟಿ ಉಳಿತಾಯ:ಮಳೆ ಬಂದರೆ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ. ದೇವರಲ್ಲೂ ಮಳೆಗಾಗಿ ಪ್ರಾರ್ಥನೆ ಮಾಡುತ್ತೇನೆ. ಮಳೆಯಿಂದ ಜನರ ಆರೋಗ್ಯ ಉತ್ತಮವಾಗುತ್ತದೆ. ವಿದ್ಯುತ್ ಖರ್ಚು ತಗ್ಗಿ ಸರ್ಕಾರಕ್ಕೆ ಒಂದು ದಿನಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಭೂಮಿ ನೆನೆಯಬೇಕು. ಮಳೆ ಬಂದರೆ ಏನೂ ತೊಂದರೆಯಿಲ್ಲ ಎಂದು ಅವರು ಹೇಳಿದರು.