ನಟ ಅನಿರುದ್ಧ್ ಜತ್ಕರ್ (ETV Bharat) ಶಿವಮೊಗ್ಗ: ಕನ್ನಡ ಚಿತ್ರರಂಗದ ಜನಪ್ರಿಯ ನಟ ಅನಿರುದ್ಧ್ ಜತ್ಕರ್ ತುಂಗಾ ನದಿ ನೀರಿನ ಸ್ವಚ್ಛತೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ. ತುಂಗಾ ನದಿಗೆ ಕಲುಷಿತ ನೀರು ಸೇರ್ಪಡೆಯ ಜೊತೆಗೆ ಬೇಡವಾದ ಗಿಡಗಳು ಬೆಳೆದು ನದಿಯನ್ನು ಹಾಳುಗೆಡವುತ್ತಿವೆ. ಹಾಗಾಗಿ, ಸ್ವಚ್ಛತೆ ಕಡೆ ಗಮನ ಹರಿಸಿ ನದಿಯನ್ನು ಜೀವಂತವಾಗಿಡಬೇಕೆಂದು ಮನವಿ ಸಲ್ಲಿಸಿದ್ದಾರೆ.
ಅನಿರುದ್ಧ್ ಇತ್ತಿಚೇಗೆ ತಮ್ಮ ಶೆಫ್ ಚಿದಂಬರ ಚಿತ್ರದ ಪ್ರಮೋಷನ್ಗೆ ಬಂದಾಗ ತುಂಗಾ ನದಿಯ ಪರಿಸ್ಥಿತಿಯನ್ನು ಗಮನಿಸಿದ್ದರು. ಹಾಗಾಗಿ ನದಿಯ ಉಳಿವಿಕೆಗೆ ಮನವಿ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ ಅನಿರುದ್ಧ್ ಜತ್ಕರ್ (ETV Bharat) ಮನವಿ ಪತ್ರದಲ್ಲೇನಿದೆ?ಶಿವಮೊಗ್ಗದಲ್ಲಿ ಆರಂಭವಾಗಿ, ಹರಿಹರ, ಹೊಸಪೇಟೆ ಮಾರ್ಗವಾಗಿ ಮಂತ್ರಾಲಯವನ್ನು ತಲುಪಿ ಮುಂದೆ ಕೃಷ್ಣಾ ನದಿಯನ್ನು ಸೇರುವ ನಮ್ಮ ನಾಡಿನ ಪವಿತ್ರ ತುಂಗೆಯ ಜಲ ಸ್ವಚ್ಛತೆ, ಪಾವಿತ್ರ್ಯತೆಯ ಜೊತೆಗೆ ಆಮ್ಲಜನಕದ ಕೊರತೆಯಿಂದ ಸಂಪೂರ್ಣವಾಗಿ ಕಲುಷಿತವಾಗಿದೆ. ಅಶುದ್ಧತೆಯಿಂದಾಗಿ ಬಳಸಲು ಯೋಗ್ಯವಲ್ಲದಂತಹ ದಯನೀಯ ಸ್ಥಿತಿಗೆ ತಲುಪಿದೆ. ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮ ವಹಿಸಬೇಕಾಗಿ ವಿನಂತಿ ಎಂದು ಅನಿರುದ್ಧ್ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ನಾವು ತಾಯಿಯಂತೆ ಪೂಜಿಸುವ, ತನ್ನದೇ ಆದ ಭವ್ಯ ಇತಿಹಾಸವನ್ನು ಹೊಂದಿರುವಂತಹ ಪ್ರಕೃತಿ ಮಾತೆಯ ಕೊಡುಗೆಯಾದ ನಮ್ಮ ನಾಡಿನ ಪುಣ್ಯ ನದಿ ತುಂಗಭದ್ರೆಯು ತನ್ನ ಶುಚಿತ್ವವನ್ನು ಕಳೆದುಕೊಂಡು, ಸಂಪೂರ್ಣ ಕಲುಷಿತವಾಗಿ ಇನ್ನು ಮುಂದೆ ಬಳಕೆಗೆ ಯೋಗ್ಯವಲ್ಲದಂತಹ ಶೋಚನೀಯ ಸ್ಥಿತಿ ತಲುಪಿರುವುದನ್ನು ನೋಡಿದಾಗ ಕನ್ನಡಿಗರಾದ ನಮಗೆ ನಿಜಕ್ಕೂ ನೋವಾಗುತ್ತದೆ. ಶಿವಮೊಗ್ಗದಲ್ಲಿ ಆರಂಭವಾಗಿ, ಹರಿಹರ, ಹೊಸಪೇಟೆಯ ಮಾರ್ಗವಾಗಿ ಮಂತ್ರಾಲಯವನ್ನು ತಲುಪಿ ಮುಂದೆ ಕೃಷ್ಣಾ ನದಿಯನ್ನು ಸೇರುವ ನಮ್ಮ ನಾಡಿನ ಪವಿತ್ರ ತುಂಗಭದ್ರಾ ನದಿಗೆ ಈಗ ಶಿವಮೊಗ್ಗ ನಗರದಲ್ಲಿ ಕಾಲುವೆಯ ಮೂಲಕ ಕೊಳಚೆ ನೀರು ಅವ್ಯಾಹತವಾಗಿ ಹರಿದು ಬರುತ್ತಿದ್ದು, ಇಡೀ ವಾತಾವರಣವೇ ಮಲೀನವಾಗಿದೆ. ದುರ್ವಾಸನೆ ಆವರಿಸಿದೆ. ಎಲ್ಲೆಲ್ಲೂ ದಟ್ಟ ಕಳೆ ವ್ಯಾಪಿಸಿಕೊಂಡು ಸ್ವಚ್ಛತೆ, ಪಾವಿತ್ರ್ಯತೆಯ ಜೊತೆಗೆ ಆಮ್ಲಜನಕದ ಕೊರತೆಯಿಂದ ತುಂಗೆಯ ಜಲವು ಇದೀಗ ಸಂಪೂರ್ಣವಾಗಿ ಕಲುಷಿತವಾಗಿದೆ.
ಇದನ್ನೂ ಓದಿ:'ತುಂಗಾ ನದಿ ನೀರು ಸ್ವಚ್ಛಗೊಳಿಸಿ': ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ನಟ ಅನಿರುದ್ಧ್
ಇಲ್ಲಿ ಸಂಸ್ಕರಿಸದ ಕೊಳಚೆ ನೀರು ವಿಶೇಷವಾಗಿ ಅಮೋನಿಯಾ ಮತ್ತು ಫಾಸ್ಪೇಟ್ ಪೋಷಕಾಂಶಗಳ ಪ್ರಬಲ ಮೂಲವಾಗಿದೆ. ಸುಲಭವಾಗಿ ಕಳೆ ಬೆಳೆಯಲು ಇದು ಏಕೈಕ ಕಾರಣವಾಗಿದೆ. ಕಳೆಗಳಿಂದಾಗಿ ನದಿಯಲ್ಲಿನ ಆಮ್ಲಜನಕದ ಮಟ್ಟವು ಶೂನ್ಯವಾಗುತ್ತದೆ. ಜಲಚರಗಳು ಜೀವಿಸುವುದಕ್ಕೂ ಯಾವುದೇ ಸಾಧ್ಯತೆಯಿರುವುದಿಲ್ಲ. ನಾವು ಕೆಲ ಮೀನುಗಳನ್ನು ಮಾತ್ರ ನೋಡಬಹುದು. ಇದು ಖಂಡಿತವಾಗಿಯೂ ನದಿಯ ವಿಷಾದನೀಯ ಸ್ಥಿತಿ. ನಿಜಕ್ಕೂ ಇದೊಂದು ದುರಂತ ಮತ್ತು ದುರದೃಷ್ಟಕರ. ಈ ಬಗ್ಗೆ ನಾವು ಜಾಗೃತಿ ಮೂಡಿಸಲೇಬೇಕಿದೆ. ಈ ಮಾಲಿನ್ಯಯವನ್ನು ಈಗಲೇ ತಡೆಗಟ್ಟುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಲ್ಲಿ ಮಳೆಯಿಂದ ಸಂಗ್ರಹವಾಗುವ ನೀರು ನದಿಗೆ ಸೇರಲು ಅವಕಾಶವೇ ಇಲ್ಲದಂತಾಗಿದೆ. ಬದಲಾಗಿ, ಮಳೆ ಬಂದಾಗ ಈ ಕೊಳಚೆ ಮಿಶ್ರಿತ ನದಿಯ ನೀರು, ಹೊರಕ್ಕೆ ಹರಿದು ಬಂದು ಜನ ಜೀವನ ಅಸ್ತವ್ಯಸ್ತವಾಗುವಂತೆ ಮಾಡುವ ಮತ್ತಷ್ಟು ಸಮಸ್ಯೆಗಳು ಎದುರಾಗುವಂತಿದೆ.
ಇದನ್ನೂ ಓದಿ:'ದರ್ಶನ್ ನಾಚಿಕೆ ಸ್ವಭಾವದ ವ್ಯಕ್ತಿ, ವಿವಾದಗಳು ಹೊಸತೇನಲ್ಲ': ನಟಿ ಭಾವನಾ ರಾಮಣ್ಣ - Bhavana Ramanna on Darshan Case
ಇಲ್ಲಿ ಯಾರನ್ನೂ ಹೊಣೆ ಮಾಡುವ, ಆರೋಪ ಹೊರಿಸುವ ಉದ್ದೇಶವಿಲ್ಲ. ನಾವೆಲ್ಲರೂ ಸೇರಿ ನಾವು ಪೂಜಿಸುವ ತುಂಗೆಯನ್ನು ಕಾಪಾಡಬೇಕಿದೆ. ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಇದನ್ನು ಕಾರ್ಯರೂಪಕ್ಕೆ ತರಬೇಕಿದೆ. ಈ ಮೂಲಕ ನಿಜ ಜೀವನದಲ್ಲೂ ನಾವು ತಾಯಿಯಂತೆ ತುಂಗಾ ನದಿಯನ್ನು ಗೌರವಿಸೋಣ ಎನ್ನುವುದೇ ನನ್ನ ಮನೋಭಿಲಾಷೆ.
ಈ ದೃಷ್ಟಿಯಿಂದ ನಾನು ತುಂಗಾ ನದಿಯ ಸ್ವಚ್ಛತೆಯ ಅಭಿಯಾನವನ್ನು ಹಮ್ಮಿಕೊಂಡಿದ್ದೇನೆ ಮತ್ತು ಮಾಧ್ಯಮದಿಂದ ಈ ಅಭಿಯಾನಕ್ಕೆ ಉತ್ತಮ ಪ್ರೋತ್ಸಾಹ ದೊರೆತಿದೆ. ಸಹೃದಯಿಗಳಾದ ತಾವು ಖಂಡಿತ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಿರೆಂದು ನಂಬಿರುತ್ತೇನೆ ಎಂದು ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಮೂಲಕ ಸಂಪರ್ಕಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಸೂಚಿಸಿದ್ದಾರೆ.