ದಾವಣಗೆರೆ: ಅಪ್ರಾಪ್ತೆಯನ್ನು ಅಪಹರಿಸಿ ಬಲವಂತವಾಗಿ ವಿವಾಹವಾಗಿ, ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಕೋರ್ಟ್ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಬಾಲಕಿಯ ಸಂಬಂಧಿಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು.
ದೂರಿನಲ್ಲಿ ಏನಿದೆ: ಅತ್ಯಾಚಾರಕ್ಕೆ ಒಳಗಾದ ಬಾಲಕಿ 2021 ಮಾರ್ಚ್ 03 ರಂದು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಾಸ್ ಮನೆಗೆ ಬಂದಿರಲಿಲ್ಲ. ಸಂಬಂಧಿಕರು ಎಲ್ಲ ಕಡೆ ಹುಡುಕಾಡಿದರೂ ಬಾಲಕಿ ಪತ್ತೆಯಾಗಿರಲಿಲ್ಲ. ಈ ಬಗ್ಗೆ ವ್ಯಕ್ತಿಯೊಬ್ಬನ ಮೇಲೆ ಅನುಮಾನ ಇರುವುದಾಗಿ ಬಾಲಕಿಯ ಸಂಬಂಧಿಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದ್ದರು. ಪಿಐ ಶಿಲ್ಪಾ ವೈ.ಎಸ್ ಅವರು ಆರೋಪಿ ಸಮೇತ ಅಪಹರಣ ಆಗಿದ್ದ ಬಾಲಕಿಯನ್ನು ಪತ್ತೆ ಮಾಡಿದ್ದರು.
ಬಾಲಕಿಯನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಆರೋಪಿಯು, ಆಕೆಯನ್ನು ಅಪಹರಿಸಿಕೊಂಡು ದಾವಣಗೆರೆಯಿಂದ - ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಕುಕ್ಕೆ ಸುಬ್ರಮಣ್ಯಕ್ಕೆ ಕರೆದುಕೊಂಡು ಹೋಗಿ ನದಿಯ ಬಳಿ ತಾಳಿ ಕಟ್ಟಿದ್ದನು. ಆ ಬಳಿಕ ಪ್ರಾಣ ಬೆದರಿಕೆ ಹಾಕಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪಿಐ ಶಿಲ್ಪಾ ವೈ.ಎಸ್ ಅವರು ನ್ಯಾಯಲಯಕ್ಕೆ ದೋಷರೋಪಣಾಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯದ ಆದೇಶ: ಈ ಪ್ರಕರಣ ಸಂಬಂಧ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಆರೋಪಿ ವಿಚಾರಣೆ ನಡೆಸಿದ್ದರು. ಆರೋಪ ಸಾಬೀತಾಗಿದ್ದರಿಂದ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ ದಂಡದ ಮೊತ್ತ 40,000 ರೂ.ಗಳನ್ನು ಪ್ರಕರಣದ ಸಂತ್ರಸ್ಥೆಗೆ ನೀಡುವಂತೆ ಹಾಗೂ ಸಂತ್ರಸ್ಥೆಗೆ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸಂತ್ರಸ್ತ ಬಾಲಕಿ ಪರವಾಗಿ ಸರ್ಕಾರಿ ವಕೀಲೆ ಸುನಂದಾ ಮಡಿವಾಳರ್ ಅವರು ನ್ಯಾಯ ಮಂಡನೆ ಮಾಡಿದ್ದಾರೆ.
ಇದನ್ನೂ ಓದಿ: 13 ವರ್ಷದ ಅತ್ಯಾಚಾರ ಸಂತ್ರಸ್ತೆಯ 28 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿಸಿದ ಹೈಕೋರ್ಟ್