ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿಕೆ (ETV Bharat) ಚಾಮರಾಜನಗರ: ಚಾಮರಾಜನಗರ ಪ್ರವಾಸೋದ್ಯಮವನ್ನು ಉತ್ತೇಜಿಸಲು 'ಚೆಲುವ ಚಾಮರಾಜನಗರ' ಎಂದು ಬ್ರ್ಯಾಂಡ್ ಮಾಡಿದ್ದ ಯೋಜನೆಗೆ ಈಗ ಮರುಜೀವ ಸಿಗುತ್ತಿದ್ದು, ರೀ ಲಾಂಚ್ ಆಗುತ್ತಿದೆ.
ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯಲ್ಲಿ ಆ.10ರಂದು ನಡೆಯಲಿರುವ ಭರಚುಕ್ಕಿ ಜಲಪಾತೋತ್ಸವ ದಿನ ಚೆಲುವ ಚಾಮರಾಜನಗರ ಎಂಬ ಬ್ರ್ಯಾಂಡ್‌ನ ಲೋಗೋ ಮತ್ತು ಭರಚುಕ್ಕಿ ಜಲಪಾತದ ಲೋಗೋ ಬಿಡುಗಡೆ ಮಾಡುತ್ತಿದ್ದು, ಜಿಲ್ಲೆಯ ಪ್ರವಾಸಿ ತಾಣಗಳನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವುದು ಇದರ ಹಿಂದಿನ ಉದ್ದೇಶ.
ಚೆಲುವ ಚಾಮರಾಜನಗರ ಮೂಲಕ ಚಾಮರಾಜನಗರವನ್ನು ಬ್ರ್ಯಾಂಡ್ ಮಾಡಬೇಕೆಂದು ಹೊರಟಾಗ ಗಡಿಜಿಲ್ಲೆಯವರೇ ಆದ ನಟ ಪುನೀತ್ ರಾಜ್ಕುಮಾರ್ ಅವರನ್ನು ರಾಯಭಾರಿಯಾಗಿ ಮಾಡಲಾಗಿತ್ತು. ಅವರು ಸಂತೋಷದಿಂದ ಒಪ್ಪಿ ಚೆಲುವ ಚಾಮರಾಜನಗರ-ಹುಲಿಗಳ ನಾಡು ಎಂಬ ವೀಡಿಯೋಗೆ ಸಂದೇಶ ಕೊಟ್ಟು ಎಲ್ಲರೂ ಚಾಮರಾಜನಗರಕ್ಕೆ ಬಂದು ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಕೊಳ್ಳಿ ಎಂದು ಮನವಿ ಮಾಡಿದ್ದರು. ನಟನ ನಿಧನದ ಬಳಿಕ ಬ್ರ್ಯಾಂಡ್ ಚಾಮರಾಜನಗರವೂ ಹಳ್ಳ ಹಿಡಿದಿತ್ತು.
ಹೊಸ ರಾಯಭಾರಿ ಯಾರು?:ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, "ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರು, ಮೈಸೂರು ಹಾಗು ದೂರದ ಊರಿನಿಂದ ಬಂದವರು ಒಂದು ದಿನ ಇಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡಲು, ಸಾಹಸ ಕ್ರೀಡೆ, ದೇಗುಲ ದರ್ಶನ, ಪ್ರಕೃತಿ ದರ್ಶನ ಮಾಡಲು ಸೂಕ್ತ ಯೋಜನೆ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಚೆಲುವ ಚಾಮರಾಜನಗರ ಬ್ರ್ಯಾಂಡ್‌ಗೆ ರಾಯಭಾರಿಯನ್ನೂ ಹುಡುಕುತ್ತಿದ್ದೇವೆ. ತಟಸ್ಥ ನಿಲುವಿನ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ, ಚಾಮರಾಜನಗರ ಜಿಲ್ಲೆಯವರೇ ಆದವರಿಗೆ ಹುಡುಕಾಟ ನಡೆಸುತ್ತಿದ್ದು, ಮುಂದಿನ 15 ದಿನಗಳಲ್ಲಿ ಅಂತಿಮವಾಗಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ:'ಲಿಡ್ಕರ್ ಉತ್ಪನ್ನಗಳ ರಾಯಭಾರಿ ಡಾಲಿ ಧನಂಜಯ್': ಸಿಎಂ ಘೋಷಣೆ; ನಟನಿಂದ ಉಚಿತ ಸೇವೆ