ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 'ಕ್ಷೀರಭಾಗ್ಯ ಯೋಜನೆ'ಯಡಿ ರೈತರ ಹಾಲಿನ ಪ್ರೋತ್ಸಾಹ ಧನ ಬಾಕಿ ಎಷ್ಟು? - Incentive For Milk Producers

ರಾಜ್ಯ ಸರ್ಕಾರ ಹಾಲಿನ ಬೆಲೆ ಹೆಚ್ಚಿಸುವ ಮೂಲಕ ಗ್ರಾಹಕರ ಮೇಲೆ ಬರೆ ಎಳೆದಿದೆ. ಮತ್ತೊಂದೆಡೆ, ಹಲವು ತಿಂಗಳುಗಳಿಂದ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಪಾವತಿಸಿಲ್ಲ. ಇದರಿಂದ ಹೈನುಗಾರರು ಕಂಗಾಲಾಗಿದ್ದಾರೆ.

By ETV Bharat Karnataka Team

Published : Jun 26, 2024, 6:37 PM IST

ರಾಜ್ಯದಲ್ಲಿ ಕ್ಷೀರ ಭಾಗ್ಯ ಯೋಜನೆಯಡಿ ರೈತರ ಹಾಲಿನ ಪ್ರೋತ್ಸಾಹ ಧನ ಬಾಕಿ ಎಷ್ಟು
ಹಾಲು ಖರೀದಿ ಕೇಂದ್ರ (ಸಂಗ್ರಹ ಚಿತ್ರ) (ETV Bharat)

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಹಾಲಿನ ಬೆಲೆಯನ್ನೂ ಏರಿಸುವ ಮೂಲಕ ಗ್ರಾಹಕರ ಮೇಲೆ ಬರೆ ಎಳೆದಿರುವ ರಾಜ್ಯ ಸರ್ಕಾರ, ರೈತರ ಸಂಕಷ್ಟವನ್ನು ಕೇಳುತ್ತಿಲ್ಲ ಎಂಬ ಬಗ್ಗೆ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ. ಕಳೆದ ಹತ್ತು ತಿಂಗಳಿಂದ ಹಾಲಿನ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡಿದ್ದ ಸರ್ಕಾರ, ಏಪ್ರಿಲ್‌ನಲ್ಲಿ 110 ಕೋಟಿ ರೂ. ಬಿಡುಗಡೆ ಮಾಡಿ ರೈತರ ಖಾತೆಗೆ ಜಮೆ ಮಾಡಿದೆ.

ರಾಜ್ಯದಲ್ಲಿ 14 ಹಾಲು ಉತ್ಪಾದಕರ ಒಕ್ಕೂಟಗಳಿವೆ. ಇದರಲ್ಲಿ 15 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಸಂಘಗಳಲ್ಲಿ 24 ಲಕ್ಷ ಮಂದಿ ನೋಂದಾಯಿತ ಹಾಲು ಉತ್ಪಾದಕರಿದ್ದಾರೆ. ಇವರಲ್ಲಿ ಪ್ರತಿದಿನ ಸುಮಾರು 9 ಲಕ್ಷ ಮಂದಿ ರೈತರು ಹಾಲು ಸರಬರಾಜು ಮಾಡುತ್ತಿದ್ದಾರೆ. ರಾಜ್ಯದಲ್ಲಿನ ಒಟ್ಟು 15,700 ಎಂಪಿಸಿಎಸ್​ಗಳಿದ್ದು, ಸಾಮಾನ್ಯ ವರ್ಗ 7,98,691, ಪರಿಶಿಷ್ಟ ಜಾತಿ 46,285 ಹಾಗೂ ಪರಿಶಿಷ್ಟ ಪಂಗಡ 32,475 ಮಂದಿ ಪ್ರೋತ್ಸಾಹಧನ ಪಡೆಯುತ್ತಿರುವ ರೈತರಿದ್ದಾರೆ.

ರಾಜ್ಯ ಸರ್ಕಾರ ಹೈನುಗಾರಿಕೆ ನಡೆಸುವ ರೈತರಿಗೆ ಅನುಕೂಲವಾಗಲಿ ಎಂಬ ಕಾರಣದಿಂದಾಗಿ ಕ್ಷೀರಧಾರೆ ಹೆಸರಿನಲ್ಲಿ ಪ್ರತಿಯೊಬ್ಬ ರೈತರಿಗೂ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಈ ರೈತರಿಗೆ ಆಗಸ್ಟ್‌ 2023ರಿಂದ ಮಾರ್ಚ್ 2023ರವರೆಗೆ ಸುಮಾರು 1,083 ಕೋಟಿ ರೂ. ಪ್ರೋತ್ಸಾಹಧನ ಬಾಕಿ ಉಳಿದಿದೆ. ಆದರೆ 2023 ಆಗಸ್ಟ್‌ ತಿಂಗಳಿಂದ ಮೇ 2024ರವರೆಗೆ ಪ್ರೋತ್ಸಾಹ ಧನವನ್ನು ಪಾವತಿಸಿಲ್ಲ. ಏಪ್ರಿಲ್‌ 2024ರ ಒಂದು ತಿಂಗಳ ಪ್ರೋತ್ಸಾಹ ಧನವನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ.

ಹಾಲು ಉತ್ಪಾದಕ ರೈತರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ, ಪ್ರತಿ ಲೀಟರ್‌ ಹಾಲಿಗೆ 2 ರೂ. ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಆರಂಭಿಸಿದ್ದರು. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಪ್ರೋತ್ಸಾಹ ಧನವನ್ನು 4 ರೂ.ಗೆ ಹೆಚ್ಚಿಸಿದರು. 2015ರಲ್ಲಿ ಇದೇ ಸಿದ್ದರಾಮಯ್ಯನವರು ಪ್ರೋತ್ಸಾಹ ಧನವನ್ನು 5 ರೂ.ಗೆ ಹೆಚ್ಚಳ ಮಾಡಿದರು. ಆರಂಭದಿಂದಲೂ ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡು ಅಲ್ಪಸ್ವಲ್ಪ ಹಣವನ್ನು ಪಾವತಿ ಮಾಡುತ್ತಿತ್ತು. ಆದರೆ, ಹಿಂದಿನ ಯಾವ ಸಾಲಿನಲ್ಲಿಯೂ 10 ತಿಂಗಳ ಬಾಕಿ ಉಳಿಸಿಕೊಂಡಿರಲಿಲ್ಲ.

ಒಂದು ತಿಂಗಳ ಹಣ ಜಮೆಯಾಗಿರುವ ಬಗ್ಗೆ ಡೈರಿ ಕಾರ್ಯದರ್ಶಿಗಳು ಹಾಲು ಉತ್ಪಾದಕರಿಗೆ ಮಾಹಿತಿ ನೀಡುತ್ತಿದ್ದಾರೆ. ಆದರೆ, ಬಾಕಿ ಉಳಿದಿರುವ 8 ತಿಂಗಳ ಹಣ ಯಾವಾಗ ಕೊಡುತ್ತಾರೆ ಎಂದು ರೈತರು ಪ್ರಶ್ನಿಸಿದರೆ, ಯಾರೂ ಉತ್ತರಿಸುತ್ತಿಲ್ಲ. ಇನ್ನು ಬಿಜೆಪಿ ನಾಯಕರು ಸಹ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಾಮಾನ್ಯವಾಗಿ ರೈತರು, ಕೃಷಿ ಜೊತೆಗೆ ಪೂರಕವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಮುಂಗಾರು ವೇಳೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಸೇರಿದಂತೆ ಹಲವಾರು ಖರ್ಚು ವೆಚ್ಚಗಳಿಗೆ ಹೈನುಗಾರಿಕೆಯಿಂದ ಬರುವ ಹಣವೇ ಆದಾಯವಾಗಿರುತ್ತದೆ.

ರೈತರಿಗಿಲ್ಲ ಪ್ರೋತ್ಸಾಹ ಧನ, ಗ್ರಾಹಕರ ಜೇಬಿಗೂ ಕತ್ತರಿ: ನಂದಿನಿ ಹಾಲಿನ ಪ್ಯಾಕೇಟ್‌ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂಎಲ್‌ ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2 ರೂ. ದರ ನಿಗದಿಪಡಿಸಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆಯೇ ವಿನಾಃ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಆದರೆ, ಪ್ರೋತ್ಸಾಹ ಧನದ ಬಗ್ಗೆ ಚಕಾರ ಎತ್ತುತ್ತಿಲ್ಲ.

ಸರ್ಕಾರ ಹೇಳುವುದೇನು?: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಾಲಿನ ಉತ್ಪಾದನೆ ಶೇ.15 ಹೆಚ್ಚಳವಾಗಿದೆ. ಹಿಂದಿನ ವರ್ಷಗಳಲ್ಲಿ ಈ ವೇಳೆಗೆ ನಿತ್ಯ ಸರಾಸರಿ 90 ಲಕ್ಷ ಲೀಟರ್‌ ಉತ್ಪಾದನೆಯಾಗುತ್ತಿದ್ದ ಪ್ರಮಾಣ ಈ ಬಾರಿ ಸರಾಸರಿ 99 ಲಕ್ಷ ಲೀಟರ್​ಗೆ ಏರಿಕೆಯಾಗಿದೆ. ಹೀಗೆ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ಹಾಲನ್ನು ರೈತರಿಂದ ಖರೀದಿಸಬೇಕು, ಯಾವುದೇ ಕಾರಣಕ್ಕೂ ಅವರಿಂದ ಹಾಲು ಪಡೆಯಲು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಒಂದು ಲೀಟರ್‌ ಹಾಲಿನ ಪ್ಯಾಕೇಟಿಗೆ ಹೆಚ್ಚುವರಿಯಾಗಿ 50 ಮಿ.ಲೀ ಹಾಲು ಸೇರಿಸಿ, ಈ ಹೆಚ್ಚುವರಿ ಹಾಲಿನ ಬೆಲೆ 2 ರೂಪಾಯಿ ಮಾತ್ರ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ ಎನ್ನುತ್ತದೆ ಸರ್ಕಾರ.

ರೈತನ ಸಂಕಷ್ಟ: ಈ ಕುರಿತು ಕಾಳನಾಯಕನಹಳ್ಳಿಯ ರೈತ ಕೃಷ್ಣ ಮಾತನಾಡಿ, "ದಿನಕ್ಕೆ 20 ಲೀಟರ್‌ ಹಾಲು ಹಾಕುವ ನನಗೆ ಕಳೆದ ಎಂಟು ತಿಂಗಳಿಂದ ಪ್ರೋತ್ಸಾಹ ಧನ ಬಂದಿಲ್ಲ. ಏಪ್ರಿಲ್ ತಿಂಗಳ ಹಣ ಮಾತ್ರ ಬಂದಿದೆ. ನೀರಿಲ್ಲದ ಕಾರಣ ಕೃಷಿ ಮಾಡುವುದನ್ನು ನಿಲ್ಲಿಸಿದ್ದೇನೆ. ಹಸುಗಳ ಹಾಲಿನಿಂದ ಜೀವನ ಸಾಗಿಸುತ್ತಿದ್ದೇವೆ. ತಕ್ಷಣ ಹಾಲಿನ ಪ್ರೋತ್ಸಾಹ ಹಣ ಬಿಡುಗಡೆ ಮಾಡಬೇಕು" ಎಂದು ಮನವಿ ಮಾಡಿದರು.

ಕೋಚಿಮುಲ್ ಅಧ್ಯಕ್ಷರ ಪ್ರತಿಕ್ರಿಯೆ: ಶಾಸಕ ಹಾಗು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಪ್ರತಿಕ್ರಿಯಿಸಿ, "ಈಗಾಗಲೇ ಒಂದು ತಿಂಗಳ ಪ್ರೋತ್ಸಾಹ ಧನ ಬಿಡುಗಡೆಯಾಗಿದೆ. ಉಳಿದ ಹಣ ಬಿಡುಗಡೆ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರ ಹಂತಹಂತವಾಗಿ ಹಣ ಬಿಡುಗಡೆ ಮಾಡಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ:ಹಾಲಿನ ದರ ಹೆಚ್ಚಳವಾಗಿಲ್ಲ, ಹೋಟೆಲ್​ಗಳು ಕಾಫಿ, ಟೀ ದರ ಹೆಚ್ಚಿಸಲು ಹೇಗೆ ಸಾಧ್ಯ?: ಸಿಎಂ ಸಿದ್ದರಾಮಯ್ಯ - CM Siddaramaiah clarification

ABOUT THE AUTHOR

...view details