ಬೆಂಗಳೂರು: ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಬರುವ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರ ನಡೆಯಿತು. ಪೂರ್ವ ವಲಯದ ಆಯುಕ್ತೆ ಸ್ನೇಹಲ್ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಪಾದಚಾರಿ ಮಾರ್ಗ ಒತ್ತುವರಿ ಮಾಡದಂತೆ ಈಗಾಗಲೇ ಅಂಗಡಿ ಅಥವಾ ಮಳಿಗೆಗಳ ಮಾಲೀಕರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದು, ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಚರ್ಚ್ ಸ್ಟ್ರೀಟ್ ರಸ್ತೆಯ ಎರಡೂ ಬದಿಯಲ್ಲಿ ಬರುವ ಸುಮಾರು 50 ಅಂಗಡಿ ಮತ್ತು ಮಳಿಗೆಗಳನ್ನು ತೆರವುಗೊಳಿಸಲಾಗಿದೆ.
ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪೊಲೀಸ್ ಸಿಬ್ಬಂದಿ, ಪಾಲಿಕೆ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳ ಸಹಯೋಗದಲ್ಲಿ ಕೈಗೊಳ್ಳಲಾಯಿತು. 20ಕ್ಕೂ ಹೆಚ್ಚು ಗ್ಯಾಂಗ್ ಮ್ಯಾನ್‌ಗಳು, 2 ಟಿಪ್ಪರ್‌ಗಳು ಹಾಗೂ 6 ಟ್ರ್ಯಾಕ್ಟರ್ಗಳ ಮೂಲಕ ಪಾದಚಾರಿ ಮಾರ್ಗದಲ್ಲಿರಿಸಿದ್ದ ಸಾಮಗ್ರಿಯನ್ನು ಪಾಲಿಕೆ ವಶಕ್ಕೆ ಪಡೆಯಿತು. ಇದೇ ವೇಳೆ, ಮತ್ತೆ ಪಾದಚಾರಿ ಮಾರ್ಗ ಒತ್ತುವರಿ ಮಾಡದಂತೆ ಎಲ್ಲ ಮಳಿಗೆಯ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.
ಪಾದಚಾರಿ ಮಾರ್ಗದಲ್ಲಿ ಆಹಾರ ತಯಾರಿಸುವುದರಿಂದ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ ತೆರೆದ ಜಾಗದಲ್ಲಿ ಸಿಲಿಂಡರ್‌ಗಳನ್ನು ಬಳಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ ಪೂರ್ವ ವಲಯ ವ್ಯಾಪ್ತಿಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಪೂರ್ವ ವಲಯದ ಆಯುಕ್ತೆ ಸ್ನೇಹಲ್ ತಿಳಿಸಿದ್ದಾರೆ.
ವಲಯ ಜಂಟಿ ಆಯುಕ್ತೆ ಸರೋಜಾ, ಕಾರ್ಯಪಾಲಕ ಅಭಿಯಂತರ ಮುನಿರೆಡ್ಡಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಾಚರಣೆಯ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: ಮೈಸೂರು ದಸರಾ: ಹೊರರಾಜ್ಯದ ವಾಹನಗಳಿಗೆ ತೆರಿಗೆ ವಿನಾಯಿತಿ - Tax Exemption