ಕರ್ನಾಟಕ

karnataka

ETV Bharat / state

ಕಲಬುರಗಿ ಅಭಿವೃದ್ಧಿಗೆ ಪ್ರಧಾನಿ ಮೋದಿ ಕೊಡುಗೆ ಏನು ?: ಮಲ್ಲಿಕಾರ್ಜುನ ಖರ್ಗೆ - Kalaburagi

ಕಲಬುರಗಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶಂಕುಸ್ಥಾಪನೆ ನೆರವೇರಿಸಿದರು.

Mallikarjuna Kharge spoke.
ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.

By ETV Bharat Karnataka Team

Published : Mar 13, 2024, 8:57 PM IST

ಕಲಬುರಗಿ:ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನಿದೆ? ಈಗ ಮತ್ತೆ ಬರುತ್ತಿದ್ದಾರೆ‌. ಏನಾದರೂ ಘೋಷಣೆ ಮಾಡುತ್ತಾರೆಯೇ? ಏನು ಘೋಷಣೆ ಮಾಡದೇ ಬಂದ್ರೆ ಏನೂ ಪ್ರಯೋಜನ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ಜಿಲ್ಲಾಡಳಿತ ಹಾಗೂ ಜಿಪಂದಿಂದ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೇವಲ ರೈಲ್ವೆಗಳಿಗೆ ಹಸಿರು ನಿಶಾನೆ ತೋರಿಸಿದರೆ ಅಭಿವೃದ್ದಿ ಆದಂತಾಗುತ್ತದೆಯೇ? ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಮೋದಿ ಹಸಿರು ನಿಶಾನೆ ತೋರಿಸಲಿ, ಅದನ್ನೂ ಬಿಟ್ಟು ಬರೀ ರೈಲ್ವೆಗಳಿಗೆ ಝಂಡಾ ತೋರಿಸಿದರೆ ಏನರ್ಥ ಎಂದ ಅವರು, ವಾಡಿಯ ರೈಲ್ವೆ ಮೇಲ್ಸೇತುವೆ ಪ್ರಾರಂಭವಾಗಿ ವರ್ಷ ಕಳೆದರೂ ಇನ್ನೂ ಮುಗಿದಿಲ್ಲ ಎಂದರು.

ಕಲ್ಯಾಣ ಕರ್ನಾಟಕದ ಯಾವ ಜಿಲ್ಲೆಗಳಿಗೆ ಏನು ಮಾಡಿದ್ದಾರೆ ? ಆದರೆ, ಕಾಂಗ್ರೆಸ್ ಪಕ್ಷಕ್ಕೆ ಬೈಯುವುದು ಮಾತ್ರ ಬಿಟ್ಟಿಲ್ಲ. ನೀವು ಎಷ್ಟೇ ಬೈದರೂ ಪರವಾಗಿಲ್ಲ, ಕೆಲಸ ಮಾಡಿ ತೋರಿಸಪ್ಪಾ ಮಾರಾಯ ಎಂದ ಖರ್ಗೆ, ಏನು ಕೆಲಸ ಮಾಡದ ನಿಮಗೆ ಯಾಕೆ ಜನರು ಮತ ಹಾಕಬೇಕು ಎಂದು‌ ಪ್ರಶ್ನಿಸಿದರು.

ಎಂಎಸ್​ಪಿ ದರ:ರೈತರ ಬೆಳೆಗಳಿಗೆ ಎಂಎಸ್​ಪಿ ದರ ನಿಗದಿ ಮಾಡಿ ಅವರ ಲಾಭ ದುಪ್ಪಟ್ಟು ಮಾಡುವುದನ್ನು ಬರೀ ಘೋಷಣೆ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಂಎಸ್ ಪಿ ಕಾನೂನು ಬದ್ಧ ಮಾಡುತ್ತೇವೆ. ಆದರೆ, ದಿಲ್ಲಿ ಗಡಿಯಲ್ಲಿ ರೈತರು ಪ್ರತಿಭಟನೆ ಕುಳಿತಿದ್ದಾರೆ. ಅವರ ಸಮಸ್ಯೆ‌ ಬಗೆಹರಿಸುವುದು ಬಿಟ್ಟು ಅವರು ದಿಲ್ಲಿಗೆ ಬರದಂತೆ ತಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ನೀಡಿದ್ದೇ ಕಾಂಗ್ರೆಸ್ ಪಕ್ಷ. ಸರ್ಕಾರದ ಐದು ಗ್ಯಾರಂಟಿಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಶಿಕ್ಷಣ ಹಾಗೂ ಆದಾಯ ದ್ವಿಗುಣ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಯುವನಿಧಿ ಗ್ಯಾರಂಟಿ ಯೋಜನೆಯಡಿ ಪದವಿ, ಡಿಪ್ಲೋಮಾ ಆದವರಿಗೆ ತರಬೇತಿ ನೀಡಿ ಒಂದು‌ ಲಕ್ಷ‌ ಸಹಾಯ‌ಧನ ನೀಡುತ್ತೇವೆ. ಅಲ್ಲದೇ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ತುಂಬುತ್ತೇವೆ ಎಂದು ಭರವಸೆ ನೀಡಿದರು.

ಸಂವಿಧಾನ:ಸಂವಿಧಾನ ರಚನೆ ಸುಮ್ಮನೆ ಆಗಿದ್ದಲ್ಲ, ಅದರ ಹಿಂದೆ ಅಸಂಖ್ಯಾತ ಜನರ ತ್ಯಾಗವಿದೆ. ಅಂತಹ ಸಂವಿಧಾನ ಬದಲಾಯಿಸುತ್ತೇವೆ ಎಂದು ಸಂಸದನೊಬ್ಬ ಹೊರಟಿದ್ದಾನೆ. ಆದರೆ, ಬಿಜೆಪಿಯವರು ಅವನ ಹೇಳಿಕೆ ಪಕ್ಷಕ್ಕೆ ಸಂಬಂಧಿಸಿಲ್ಲ ಎನ್ನುತ್ತಿದ್ದಾರೆ. ಅದ್ಹೇಗೆ ಸಂಬಂಧವಿಲ್ಲ ? ಅವನು‌ ಚುನಾವಣೆಯಲ್ಲಿ ನಿಲ್ಲಲು ಟಿಕೆಟ್ ನೀಡಿದ್ದು ಬಿಜೆಪಿಯವರಲ್ಲವೇ? ಸಂವಿಧಾನದ ಆಶಯಕ್ಕೆ ಧಕ್ಕೆ ಆಗಿ ಮತ್ತೆ ಗುಲಾಮಗಿರಿ ಬಂದರೆ ದೇಶದ ಭವಿಷ್ಯಕ್ಕೆ ಕುತ್ತು ಬರಲಿದೆ. ಅದಕ್ಕಾಗಿ ಯುವಕರು ಸಂವಿಧಾನ ರಕ್ಷಣೆ ಮಾಡಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಮೋದಿ ಸಿಎಂ ಆಗಿದ್ದಾಗ 25,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಈಗಲೂ ಮುಂದುವರಿದಿದೆ. ರೈತರ ಸಮಸ್ಯೆ ಕಡೆ ಗಮನ ಹರಿಸದೇ ಅಂಬಾನಿ, ಅದಾನಿ ಅಂತ ಹೊರಟಿದ್ದಾರೆ ಎಂದು ಟೀಕಿಸಿದರು.

ಹೈ ಕ ಭಾಗದಲ್ಲಿ ವಿವಿಧ ಯೋಜನೆ ಜಾರಿ:ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸುಭದ್ರತೆ ಹಾಗೂ‌ ಬೆಳವಣಿಗೆಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಿದ್ದೇವೆ. ಮಹಿಳೆಯರ ಸಬಲೀಕರಣಕ್ಕೆ ಹಾಗೂ ಯುವಕರಿಗೆ ಉದ್ಯೋಗಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ನೀಡಿ ಆದಾಯ ಡಬಲ್ ಮಾಡಲು‌ ಯೋಜನೆ ರೂಪಿಸಲಿದ್ದೇವೆ. ಹೈ. ಕ. ಭಾಗದ ಬಡ ಜನರ ಆದಾಯ ಬೆಳವಣಿಗೆಗೆ ಯೋಜನೆ ಜಾರಿಗೆ ತರಲಿದ್ದೇವೆ ಎಂದು ಖರ್ಗೆ ಹೇಳಿದರು. ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ಬಂದ್ ಮಾಡಿ, ಸಾರ್ವಜನಿಕರು ನೀಡಿದ ದೇಣಿಗೆ ಹಣವನ್ನು ಸೀಜ್ ಮಾಡಿದ್ದಾರೆ. 300-400 ಕೋಟಿ ರೂ. ದಂಡ ಹಾಕಿ ಖರ್ಚಿಗೆ ಹಣವಿಲ್ಲದಂತೆ ಮಾಡಿದ್ದಾರೆ. ಈ ಸಲ ಕಾಂಗ್ರೆಸ್​​ಗೆ ಮತ ನೀಡಿ ಆಶೀರ್ವಾದ ಮಾಡಿ ಎಂದು ಕೋರಿದರು.

ಐದು ಗ್ಯಾರಂಟಿ ಯೋಜನೆ:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಷ್ಟದ ಸಮಯದಲ್ಲಿ ಕೆಂದ್ರ ಸರ್ಕಾರ ನಮಗೆ ಸಹಾಯ ಮಾಡದಿದ್ದರೂ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಿ, ನುಡಿದಂತೆ ನಡೆದಿದ್ದೇವೆ. CAA, ದೇವಾಲಯ ಹೊರತುಪಡಿಸಿದರೆ, ಬಿಜೆಪಿಯವರಿಗೆ ಬೇರೆ ವಿಚಾರಗಳಿಲ್ಲ. ಧರ್ಮದಲ್ಲಿ ರಾಜಕಾರಣ‌ ಇರಬಾರದು. ಆದರೆ, ರಾಜಕಾರಣದಲ್ಲಿ ಧರ್ಮ ಇರಬೇಕು. ಕಲಬುರಗಿ ಪುಣ್ಯದ ನಾಡು. ಎಲ್ಲ ಧರ್ಮದ ಜನರಿಗೆ ಸಮಾನವಾದ ಅವಕಾಶ ನೀಡಲಾಗಿದೆ ಎಂದರು.

ಗೃಹಲಕ್ಷ್ಮೀ ಯೋಜನೆಯಡಿ 1.14 ಕೋಟಿ ಫಲಾನುಭವಿಗಳು, ಗೃಹಜ್ಯೋತಿ ಯೋಜನೆಯಡಿ 1.05 ಕೋಟಿ ಫಲಾನುಭವಿಗಳು, ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಬಸ್ ಪ್ರಯಾಣ ಲಾಭ ಪಡೆದುಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ 5 kg ಅಕ್ಕಿ ಹಾಗೂ 5 kg ಅಕ್ಕಿ ಖರೀದಿಸಲು ರೂ 170 ಫಲಾನುಭವಿಗಳು, ಯುವನಿಧಿ ಯೋಜನೆಯಡಿ ಪದವೀಧರರಿಗೆ ರೂ 3000 ಹಾಗೂ ಡಿಪ್ಲೋಮಾ ಆದವರಿಗೆ ರೂ 1500 ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಲಬುರಗಿ ರೋಟಿ ಬ್ರ್ಯಾಂಡ್ ಬಿಡುಗಡೆ ಮಾಡಲಾಯಿತು.

ಇದನ್ನೂಓದಿ:ಸಂವಿಧಾನ ಬದಲಾವಣೆ ನಮ್ಮ ಪಕ್ಷದ ಅಜೆಂಡಾದಲ್ಲಿ ಇಲ್ಲ: ಶಾಸಕ ಮಹೇಶ್​ ಟೆಂಗಿನಕಾಯಿ

ABOUT THE AUTHOR

...view details