ಬೆಂಗಳೂರು: ರಾಜ್ಯದಲ್ಲಿ ಕೊಂಚ ಬಿಡುವು ನೀಡಿದ್ದ ಮುಂಗಾರು ಮಳೆ ಮತ್ತೆ ಚುರುಕು ಪಡೆದಿರುವ ಕಾರಣ ಹಲವು ಜಿಲ್ಲೆಗಳಲ್ಲಿ ನಿನ್ನೆಯಿಂದ ಮತ್ತೆ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಎರಡು ದಿನಕ್ಕೆ ಅನ್ವಯವಾಗುವಂತೆ ಮತ್ತೆ ಅಲರ್ಟ್ಗಳನ್ನು ಘೋಷಿಸಿದೆ.
ಮುಖ್ಯವಾಗಿ, ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡಕ್ಕೆ ಮುಂದಿನ 24 ಗಂಟೆಗಳ ಕಾಲ ಆರೆಂಜ್ ಮತ್ತು ನಂತರದ ಒಂದು ದಿನ ಯೆಲ್ಲೋ ಅಲರ್ಟ್ ಘೋಷಿಸಿದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಮುಂದಿನ 48 ಗಂಟೆಗಳ ಕಾಲ ಆರೆಂಜ್ ಅಲರ್ಟ್ ನೀಡಲಾಗಿದೆ.
ಉತ್ತರ ಒಳನಾಡಿನ ರಾಯಚೂರು, ಯಾದಗಿರಿ ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ ಮತ್ತು ಹಾಸನ ಜಿಲ್ಲೆಗೆ ಎರಡು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ. ದಾವಣಗೆರೆ ಜಿಲ್ಲೆಗೆ ಇಂದು ಮತ್ತು ನಾಳೆ ಯೆಲ್ಲೋ, ನಂತರದ ಒಂದು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ.
ಎರಡು ದಿನ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಹಾಸನ, ಬಳ್ಳಾರಿ, ತುಮಕೂರು, ಮೈಸೂರು, ಕೊಡಗು ಜಿಲ್ಲೆಗಳಲ್ಲೂ ಹೆಚ್ಚು ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿಗ್ರಿ ಮತ್ತು 22 ಡಿಗ್ರಿ ದಾಖಲಾಗಲಿದೆ ಎಂದು ಮಾಹಿತಿ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ: ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನ ಕರಾವಳಿ ಭಾಗದಲ್ಲಿ ಕಂಡುಬರಲಿದೆ. ಪ್ರತಿ ಗಂಟೆಗೆ 45 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸೂಚಿಸಿದೆ.
"ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಕೇರಳ ಕರಾವಳಿಯ ಮೇಲೆ ಚಂಡಮಾರುತದ ಪರಿಚಲನೆ ಈಗ ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ದಕ್ಷಿಣ ಕೇರಳ ಕರಾವಳಿಯಲ್ಲಿದೆ. ಸಮುದ್ರ ಮಟ್ಟದಿಂದ 4.5 ಕಿ.ಮೀ ಎತ್ತರದಲ್ಲಿದೆ. ಇನ್ನೊಂದೆಡೆ, ದಕ್ಷಿಣ ತೆಲಂಗಾಣದಿಂದ ಚಂಡಮಾರುತ ಕೊಂಕಣದಿಂದ ಹಾದು ಹೋಗಲಿದೆ. ಆದ್ದರಿಂದ ನೈಋತ್ಯ ಮಾನ್ಸೂನ್ ಒಳನಾಡಿನಲ್ಲಿ ಸಾಮಾನ್ಯವಾಗಿದ್ದರೂ ಕರಾವಳಿಯಲ್ಲಿ ದುರ್ಬಲವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಕರಾವಳಿಯ ಹಲವೆಡೆ ಮಳೆಯಾಗಿದೆ ಮತ್ತು ಒಳನಾಡಿನಲ್ಲಿ ಕೆಲವು ಸ್ಥಳಗಳಲ್ಲಿ ಮಳೆಯ ಸಾಧ್ಯತೆ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು 8 ಸೆ. ಮೀ ಮಳೆ ಕೊಪ್ಪಳ ಜಿಲ್ಲೆಯ ತಾವರಗೇರಾದಲ್ಲಿ ದಾಖಲಾಗಿದೆ. ಗಂಗಾವತಿಯಲ್ಲಿ 7 ಸೆ. ಮೀ ಮಳೆ ಸುರಿದಿದೆ" ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್ ಪುವಿಯರಸನ್ ಹೇಳಿದ್ದಾರೆ.
ಇದನ್ನೂ ಓದಿ:ಇಂದಿನಿಂದ ಐದು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ - Karnataka Rain forecast