ಬೆಂಗಳೂರು:''ತುಂಗಭದ್ರಾ ಜಲಾಶಯ ಗೇಟ್ನ ತುಂಡಾದ ಚೈನ್ ಅನ್ನು ನಾಲ್ಕೈದು ದಿನದಲ್ಲಿ ರಿಪೇರಿ ಮಾಡ್ತೇವೆ. ಯಾರು ಕೂಡ ಭಯ ಪಡುವ ಅಗತ್ಯವಿಲ್ಲ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ತುಂಗಭದ್ರಾ ಜಲಾಶಯ ಗೇಟ್ನ ಚೈನ್ ತುಂಡಾಗಿರುವ ಬಗ್ಗೆ ಅಪಾಯ ಇತ್ತು. ನಾಲ್ಕೈದು ದಿನದಲ್ಲಿ ರಿಪೇರಿ ಮಾಡ್ತೇವೆ. ಆದ್ರೆ, ಭಯ ಪಡಬೇಕಾಗಿಲ್ಲ. ನಾಳೆ ಸಿಎಂ ಕೂಡ ಭೇಟಿ ನೀಡ್ತಾ ಇದ್ದಾರೆ. ಟೆಕ್ನಿಕಲ್ ಟೀಮ್ ಅನ್ನು ಕಳಿಸಿದ್ದೇವೆ. 70 ವರ್ಷದಲ್ಲಿ ಮೊದಲ ಬಾರಿಗೆ ಹೀಗಾಗಿದೆ. ಬೇರೆ ಕಡೆ ಎಲ್ಲ, ಎರಡು ಆಯ್ಕೆ ಇದೆ. ಇಲ್ಲಿ ಒಂದೇ ಚೈನ್ ಇತ್ತು. ಆರೋಪ ಮಾಡೋರು ಮಾಡಲಿ. ರಾಜಕೀಯ ಮಾಡೋರು ಇದ್ದೇ ಇರ್ತಾರೆ. ನಮಗೆ ಎಲ್ಲ ಡ್ಯಾಂಗಳು ಒಂದೇ'' ಎಂದರು.
''ನಾಳೆ ನಾಡಿದ್ದು ತಜ್ಞರ ಸಮಿತಿ ರಚನೆ ಮಾಡ್ತೇವೆ. ಎಲ್ಲಾ ಡ್ಯಾಂಗಳಿಗೆ ಕಳಿಸುತ್ತೇವೆ. ಆ ಸಮಿತಿ ಎಲ್ಲಾ ಡ್ಯಾಂಗಳಿಗೆ ವಿಸಿಟ್ ಮಾಡುತ್ತದೆ. ಸುರಕ್ಷತೆ ಬಗ್ಗೆ ಪರಿಶೀಲನೆ ಮಾಡಲಿದೆ. ಬೇರೆ ಕಡೆ ಡಬಲ್ ಆಪ್ಷನ್ ಇದೆ. ಒಂದು ಗೇಟ್ಗೆ ಎರಡು ಲಿಂಕ್ ಇರುತ್ತವೆ. ಆದರೆ, ಇಲ್ಲಿ ಒಂದೇ ಒಂದು ಚೈನ್ ಇದೆ. 50ರಿಂದ 60 TMC ನೀರು ಉಳಿಸುವ ಕೆಲಸ ಆಗ್ತಿದೆ. ತಕ್ಷಣವೇ ಆರ್ಡರ್ ಮಾಡಿದ್ದೇವೆ. ಜೆಸ್ಡಬ್ಲ್ಯೂ ಕಂಪನಿ ಜೊತೆಗೆ ಮಾತಾಡಿದ್ದೇನೆ. ಮೊದಲು ಮಾಡಿದವರಿಗೆ ಡಿಸೈನ್ ಕೊಟ್ಟಿದ್ದೇವೆ. ನಾಲ್ಕೈದು ದಿನದಲ್ಲಿ ಆಗಲಿದೆ ಎಂದು ನಮಗೆ ಹೇಳಿದ್ದಾರೆ'' ಎಂದು ತಿಳಿಸಿದರು.
ಬೆಂಗಳೂರಿನ ರಾತ್ರಿ ವರುಣನ ಅಬ್ಬರ ಹಿನ್ನೆಲೆ ಹಲವು ಕಡೆ ನೀರು ನುಗ್ಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ''ಬೆಂಗಳೂರಿನಲ್ಲಿರುವ ಯಾವ ಕೆರೆಗಳು ತುಂಬಿಲ್ಲ. ಮಳೆ ಬರಬೇಕು, ಅಪಾರ್ಟ್ಮೆಂಟ್ಗೆ ನೀರು ನುಗ್ಗಿದ್ರೆ ಸರಿ ಮಾಡೋಣ. ಎಲ್ಲೆಡೆ ಅಂತರ್ಜಲ ಹೆಚ್ಚಬೇಕು. ಕನಕಪುರ, ಮಾಗಡಿ, ಚನ್ನಪಟ್ಟಣ, ತುಮಕೂರು. ಕುಣಿಗಲ್, ಕೋಲಾರ ಸುತ್ತಮುತ್ತ ಮಳೆ ಬಂದಿಲ್ಲ. ಆ ಕಡೆ ಮಳೆ ಬಂದಿದೆ, ಡ್ಯಾಂಗಳು ಫುಲ್ ಆಗಿವೆ'' ಎಂದರು.
ಇದನ್ನೂ ಓದಿ:ತುಂಗಭದ್ರಾ ಡ್ಯಾಂನಿಂದ 3.5ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಏನೆಲ್ಲ ಅಪಾಯ; ಹೊಸ ಗೇಟ್ ಅಳವಡಿಕೆ ಯಾವಾಗ? - TB Dam Current Development