ಬಾಗಲಕೋಟೆ: ಅನರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡ್ ಕೊಡಲ್ಲ ಅಂತ ಹೇಳಿದ್ದೇವೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವವರಿಗೆ, ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಪಿಎಲ್ ಕಾರ್ಡ್ ಕೊಡಬೇಕಾ? ಹಾಗಾಗಿ ಅರ್ಹರಿದ್ದವರಿಗೆ ಬಿಪಿಎಲ್ ಕಾರ್ಡ್ ಕೊಟ್ಟೇ ಕೊಡುತ್ತೇವೆ. ಹಾಗೆಯೇ ಅನರ್ಹರಿಂದ ಬಿಪಿಎಲ್ ಕಾರ್ಡ್ ತೆಗೆದು, ಎಪಿಎಲ್ ಕಾರ್ಡ್ ಮಾಡಿದರೆ ಹೇಗೆ ಎಂದು ಯೋಚಿಸಿದ್ದೇವೆ. ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಾಗಲಕೋಟೆ ಜಿಲ್ಲೆಯ ಪ್ರವಾಸದಲ್ಲಿರುವ ಸಿಎಂ ಭಾನುವಾರ ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. "ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಿಸದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕಟ್ಟನಿಟ್ಟಿನ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದರು.
ಅನರ್ಹರ ಬಿಪಿಎಲ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದು ಕಡಿತಗೊಳ್ಳುತ್ತದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿ, "ಗೃಹಲಕ್ಷ್ಮಿಗೆ ಬೇರೆಯೇ ಮಾನದಂಡಗಳಿವೆ. ತೆರಿಗೆ ಪಾವತಿ ಮಾಡುವವರಿಗೆ ಕೊಡುವುದಿಲ್ಲ. ಬಿಪಿಎಲ್ ಕಾರ್ಡ್ಗಳು ಬೇರೆ. ಇದಕ್ಕೂ ಅದಕ್ಕೂ ಹೋಲಿಕೆ ಮಾಡಲು ಬರುವುದಿಲ್ಲ. ಜನರನ್ನು ಗೊಂದಲ ಮಾಡುವುದು ಬೇಡ" ಎಂದು ಹೇಳಿದರು.
ನವನಗರದ ತೋಟಗಾರಿಕೆ ವಿಶ್ವವಿದ್ಯಾಲಯ ಪಕ್ಕದ ಮೈದಾನದಲ್ಲಿ ನಡೆದ 71ನೇ ಸಹಕಾರ ಸಪ್ತಾಹ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, "ಕಳೆದ ವರ್ಷ ಕೇಂದ್ರ 5600 ಕೋಟಿ ರೂ. ನಬಾರ್ಡ್ನಿಂದ ಸಾಲ ನೀಡಿತ್ತು. ಈ ಬಾರಿ 2340 ಕೋಟಿ ಸಾಲ ನೀಡಿದೆ. ರೈತರಿಗೆ ಮಾಡುವ ದ್ರೋಹ ಅಲ್ವಾ?" ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.