ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿಕೆ (ETV Bharat) ವಿಜಯಪುರ:ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಾಡಿದ್ದು ನಡೆಯಲಿದೆ. ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂದು ನಗರದಲ್ಲಿ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ರಾಜ್ಯದಲ್ಲಿ ನಾಡಿದ್ದು ಮತದಾನ ನಡೆಯಲಿದೆ. ನಾವು ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಒಟ್ಟು 20 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಗ್ಯಾರಂಟಿ ಯೋಜನೆಗಳನ್ನು ನಂಬಿ ಜನರು ಮತ ಹಾಕಲಿದ್ದಾರೆ. ಮೋದಿ ವೇವ್ ಇಲ್ಲ. ಅಚ್ಛೇ ದಿನ್ ಬರಲಿಲ್ಲ. ಮೋದಿ ಯಾವುದೇ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಾಸನ್ ಪೆನ್ಡ್ರೈವ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಂ ಬಿ ಪಾಟೀಲ್, ಕಾನೂನು ಇದೆ, ಕೋರ್ಟ್ ಇದೆ. ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ. ಪ್ರಕರಣ ಸಂಬಂಧ ಸರ್ಕಾರ ಗಂಭೀರವಾಗಿದೆ. ಅವರಿಗೆ ಟೈಮ್ ಲೈನ್ ಕೊಟ್ಟಿದ್ದೇವೆ. ಹಾಜರಾಗದೆ ಹೋದರೆ ಕಠಿಣ ಪರಿಸ್ಥಿತಿ ಎದುರಿಸ್ತಾರೆ. ಪ್ರಜ್ವಲ್ ಬರದೆ ಹೋದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಾತಾಳದಲ್ಲಿದ್ರು ಹಿಡಿದುಕೊಂಡು ಬರುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್ ಡಿ ರೇವಣ್ಣ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತದೆ. ಎಸ್ಐಟಿ ತನಿಖೆ ಮಾಡುತ್ತಿದೆ. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಕಾನೂನು ತನ್ನದೇಯಾದ ಕ್ರಮ ಕೈಗೊಳ್ಳುತ್ತೆ. ತನಿಖಾ ಹಂತದಲ್ಲಿ ನಾವು ಏನು ಮಾತನಾಡಬಾರದು. ಸತ್ಯ ಅಸತ್ಯ ಹೊರಗೆ ಬರುತ್ತದೆ ಎಂದರು.
ಸಿಡಿ ಹಿಂದೆ ಕಾಂಗ್ರೆಸ್ ನಾಯಕರು ಇದ್ದಾರೆಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ನಾಯಕರು ಇಂಥ ಕೆಲಸ ಮಾಡೋಕೆ ಹೇಳಿದ್ರಾ.. ಇದು ಅತ್ಯಂತ ಹೀನ ಪ್ರಕರಣ. ಪ್ರಜ್ವಲ್ ಕೇಸ್ ಅತಿರೇಕವಾಯ್ತು ಎಂದರು. ರಾಜ್ಯದಲ್ಲಿ ಹೆಚ್ಚಾಗ್ತಿರುವ ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ಹನಿ ಟ್ರ್ಯಾಪ್ ಕೀಳುತನ, ಪ್ರಜ್ವಲ್ ಕೇಸ್ ಬೇರೆ. ಹನಿಟ್ರ್ಯಾಪ್ ಸಿಡಿ ಬಿಡುಗಡೆಯಿಂದ ಜನರು ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಹನಿಟ್ರ್ಯಾಪ್ ಪ್ರಕರಣಗಳ ವಿಚಾರದಲ್ಲಿ ಎಂಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜ್ವಲ್ ಪ್ರಕರಣ ಎಲೆಕ್ಷನ್ ಪ್ರಭಾವ ಬೀರಲ್ಲ ಎಂಬ ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾಕೆ ಸಂಬಂಧ ಪಡಲ್ಲ, ಸಂಬಂಧ ಇರುತ್ತದೆ. ನಾವು ಇಂಥ ಕೆಲಸ ಮಾಡಿ ಅಂತ ಹೇಳೋಕೆ ಸಾಧ್ಯವಿಲ್ಲ. ಮತದಾನದ ಮೇಲೆ ಪ್ರಭಾವ ಆಗುತ್ತದೆ. ಮಹಿಳೆಯರು ಜೆಡಿಎಸ್ ಪಕ್ಷದ ಮೇಲೆ ಅಸಹ್ಯ ಪಡುತ್ತಿದ್ದಾರೆ. ಇದು ಪರಿಣಾಮ ಬೀರುತ್ತದೆ. ಸಿಡಿ ಹಿಂದೆ ಕಾಂಗ್ರೆಸ್‌ನಾಯಕರು ಇಲ್ಲ. ಸಿಡಿ ವಿಚಾರ ಕೀಳುಮಟ್ಟದ್ದು. ವೈಯುಕ್ತಿಕ ಕೇಸ್ಗಳು ಟ್ರ್ಯಾಪ್ ಮಾಡೋದು ಕೀಳು ಮಟ್ಟದ್ದು ಆಗಿದೆ. ಇದನ್ನು ಬಿಟ್ಟು ಹೊರ ಬರಬೇಕಿದೆ. ರಾಜಕಾರಣ ಟೀಕೆ ಟಿಪ್ಪಣಿ ಅಭಿವೃದ್ಧಿ ಕಳಪೆ ಕುರಿತು ಆರೋಪ ಪ್ರತ್ಯಾರೋಪ ನಡೆಯಲಿ. ಆದರೆ ಹನಿಟ್ರ್ಯಾಪ್ನಂಥ, ಸಿಡಿಗಳಂತ ಕೃತ್ಯಗಳು ನಿಲ್ಲಬೇಕು. ಪ್ರಜ್ವಲ್ ರೇವಣ್ಣ ಅವರದ್ದು ಗಂಭೀರ ಪ್ರಕರಣ ಎಂದರು.
ಓದಿ:ಪ್ರಜ್ವಲ್ ರೇವಣ್ಣ ವಿದೇಶದಿಂದ ಆಗಮನ ಸಾಧ್ಯತೆ: ವಶಕ್ಕೆ ಪಡೆಯಲು SIT ಸಿದ್ಧತೆ - Prajwal Revanna Case