ಬೆಂಗಳೂರು: "ರಾಜಭವನದಲ್ಲಿ ಮಾಹಿತಿ ಸೋರಿಕೆ ಆಗುತ್ತದೆಂದರೆ ಅದಕ್ಕೆ ರಾಜಭವನವೇ ಜವಾಬ್ದಾರಿಯಾಗುತ್ತದೆ. ಅದಕ್ಕೆ ನಾವು ಹೇಗೆ ಜವಾಬ್ದಾರಿ ಆಗುತ್ತೇವೆ? ಬೇರೆಯವರಿಗೆ ರಾಜಭವನದ ಕಾಂಪೌಂಡ್ ಒಳಹೋಗಲು ಆಗುವುದಿಲ್ಲ. ಹಾಗಾಗಿ ಅಲ್ಲಿ ಯಾರೋ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಅದನ್ನು ತನಿಖೆ ಮಾಡಬೇಕೆಂದರೆ ರಾಜ್ಯ ಸರ್ಕಾರ ತನಿಖೆ ಮಾಡುತ್ತದೆ. ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟರೆ ತನಿಖೆ ಮಾಡುತ್ತೇವೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜಭವನದಿಂದಲೇ ಮಾಹಿತಿ ಸೋರಿಕೆ ಆರೋಪ ಕುರಿತು ಪ್ರತಿಕ್ರಿಯೆ ನೀಡಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat) ಸಿಎಂ ರಾಜೀನಾಮೆಗೆ ಕೋಳಿವಾಡ ಆಗ್ರಹ ಕುರಿತು ಪ್ರತಿಕ್ರಿಯಿಸಿ, "ಅವರು ಈಗ ಯಾವುದೇ ಸ್ಥಾನಮಾನದಲ್ಲಿಲ್ಲ. ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ" ಎಂದರು.
ಜನಪ್ರತಿನಿಧಿಗಳ ನ್ಯಾಯಾಲಯ ಧರ್ಮ ಪಾಲನೆ ಮಾಡಿ ಎಂಬುದಾಗಿ ಉಲ್ಲೇಖಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಬರೇ ಆಡಳಿತ ಪಕ್ಷದಲ್ಲಿರುವವರು ಧರ್ಮ ಪಾಲನೆ ಮಾಡಿದರೆ ಆಗುವುದಿಲ್ಲ. ಎಲ್ಲರೂ ಪಾಲಿಸಬೇಕು. ಧರ್ಮ ಎಲ್ಲರಿಗೂ ಒಂದೇ. ಆಡಳಿತ ಮಾಡುವವರಿಗೆ ಒಂದು ಧರ್ಮ, ವಿಪಕ್ಷಗಳಿಗೆ ಒಂದು ಧರ್ಮ, ನ್ಯಾಯಾಧೀಶರಿಗೆ ಒಂದು ಧರ್ಮ ಅಂತ ಇಲ್ಲ. ಎಲ್ಲರಿಗೂ ಒಂದೇ ಧರ್ಮ. ಆಗ ರಾಮ ರಾಜ್ಯ ಆಗುತ್ತೆ ಎಂದು ಹೇಳಬಹುದು" ಎಂದು ತಿಳಿಸಿದರು.
ಸಿದ್ದರಾಮಯ್ಯರನ್ನು ಗಮನದಲ್ಲಿರಿಸಿ ತೀರ್ಮಾನಿಸಿಲ್ಲ:"ದಿಲ್ಲಿ ಪೊಲೀಸ್ ಕಾಯ್ದೆ ಪ್ರಕಾರ ಸಿಬಿಐಗೆ ತನಿಖೆ ಮಾಡಲು ಅವಕಾಶ ಇದೆ. ಅನೇಕ ರಾಜ್ಯ ಸರ್ಕಾರಗಳು ಸಿಬಿಐಗೆ ನೇರವಾಗಿ ಬಂದು ತನಿಖೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಕೆಲವೊಂದೆಡೆ ನಮ್ಮ ಅನುಮತಿ ಬೇಕು ಎಂದು ಹೇಳಿದೆ. ನಮ್ಮ ರಾಜ್ಯದಲ್ಲಿ ಇದು ಮೊದಲ ಬಾರಿಗೆ ಮಾಡಿರುವುದಲ್ಲ. ಇದರ ಬಗ್ಗೆ ಆಶ್ಚರ್ಯಪಡುವ ಅಗತ್ಯ ಇಲ್ಲ. ಈ ಮುಂಚೆನೂ ನಾಲ್ಕೈದು ಬಾರಿ ನಮ್ಮ ಅನುಮತಿ ಪಡೆದು ತನಿಖೆ ಮಾಡಬೇಕು ಎಂಬ ತೀರ್ಮಾನಗಳು ಆಗಿವೆ" ಎಂದರು.
"ಅನೇಕ ಸಾರಿ ಸಿಬಿಐ ಬಂದು ರಾಜ್ಯ ಸರ್ಕಾರದ ಗಮನಕ್ಕೆ ಬಾರದೇ, ಯಾವುದೇ ಮಾಹಿತಿ ನೀಡದೇ ತನಿಖೆ ಮಾಡುವುದು ಸರಿ ಇಲ್ಲ. ಹಾಗಾಗಿ ನಾವು ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಇದು ಕೇವಲ ಸಿದ್ದರಾಮಯ್ಯರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ತೀರ್ಮಾನ ಅಲ್ಲ. ಇದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೂ ಸಂಬಂಧಿಸಿದೆ" ಎಂದು ಹೇಳಿದರು.
ರಾಜ್ಯಪಾಲರ ಪತ್ರಗಳಿಗೆ ಉತ್ತರ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿ, "ಎಲ್ಲ ಪತ್ರಗಳಿಗೂ ಉತ್ತರ ಕೊಡೋಣ. ಆದರೆ ಸಂಪುಟದ ಗಮನಕ್ಕೆ ತಂದು ಉತ್ತರ ಕೊಡಬೇಕು ಅಂತ ಆಗಿದೆ. ಸರ್ಕಾರದ ಗಮನಕ್ಕೆ ತಂದು ಉತ್ತರ ನೀಡಿ ಅಂತ ತೀರ್ಮಾನಿಸಲಾಗಿದೆ. ಎಲ್ಲವೂ ಸರ್ಕಾರದ ಗಮನಕ್ಕೆ ಇರಬೇಕಾಗುತ್ತದೆ. ತೆರೆಮರೆಯಲ್ಲಿ ಮಾಹಿತಿ ಪಡೆಯೋದು ಬೇಡ. ಎಲ್ಲರಿಗೂ ತಿಳಿದೇ ಮಾಡಲಿ. ಅರ್ಕಾವತಿ ರೀಡೂ ಸಂಬಂಧವೂ ಕ್ಯಾಬಿನೆಟ್ನಲ್ಲಿ ತೀರ್ಮಾನ ಆಗುತ್ತದೆ. ಬೇಕು ಅಂದ್ರೆ ಕೊಡಬೇಕಾಗುತ್ತದೆ. ಸರ್ಕಾರ ಅಂದ್ರೆ ಸಿಎಸ್ ಅವರು ಒಬ್ಬರೇ ಅಲ್ಲ. ಅವರು ಒಬ್ಬ ಅಧಿಕಾರಿ ಅಷ್ಟೇ. ಸಂಪುಟವೂ ಇರುತ್ತಲ್ಲ. ಹಾಗಾಗಿ ಈ ನಿರ್ಣಯ ಮಾಡಲಾಗಿದೆ" ಎಂದು ತಿಳಿಸಿದರು.
ಸಿಎಂ ರಾಜಿನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, "ಮಾಡಲಿ, ಅವರು ವಿರೋಧ ಪಕ್ಷದವರು. ಮೊದಲಿನಿಂದಲೂ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗ ಸ್ವಲ್ಪ ಎಕ್ಸಲೇಟರ್ ಜಾಸ್ತಿ ಆಗಿದೆ ಅಷ್ಟೇ" ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಹೈಕೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ: ರಾಜಭವನ ಬಳಿ ಹೆಚ್ಚಿನ ಭದ್ರತೆ - Tight Security At Raj Bhavan