ಬೆಂಗಳೂರು:ಸಿಲಿಕಾನ್ ಸಿಟಿಯ 58 ಕಡೆ ಕುಡಿಯುವ ನೀರಿನ ಸಮಸ್ಯೆಯಿದ್ದು, ಈ ಪೈಕಿ ಮಹದೇವಪುರ 16, ಆರ್.ಆರ್.ನಗರ 25, ಬೊಮ್ಮನಹಲ್ಳಿ 5 ಕಡೆ, ಯಲಹಂಕ ಹಾಗೂ ದಾಸರಹಳ್ಳಿಯಲ್ಲಿ 3 ಕಡೆಗಳಲ್ಲಿ ನೀರಿನ ಅಭಾವ ಹೆಚ್ಚಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ವಾರ್ಷಿಕವಾಗಿ 19 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗುತ್ತಿದ್ದು, ಪ್ರತಿನಿತ್ಯ ಸುಮಾರು 1,472 ಎಂ.ಎಲ್.ಡಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಫೆಬ್ರವರಿಯಿಂದ ಜುಲೈವರೆಗೆ ಅಂದಾಜು 9.48 ಟಿಎಂಸಿ ನೀರು ಅವಶ್ಯಕತೆಯಿದೆ.
ಬತ್ತಿದ 1,214 ಕೊಳವೆ ಬಾವಿಗಳು:ನಗರದಲ್ಲಿ ಜಲಮಂಡಳಿಯಿಂದ 10.84 ಲಕ್ಷ ನೀರಿನ ಸಂಪರ್ಕ ಹೊಂದಿವೆ. ನಗರದಲ್ಲಿ 10,955 ಕೊಳವೆ ಬಾವಿಗಳಲ್ಲಿ 1,214 ಕೊಳವೆ ಬಾವಿಗಳು ಬತ್ತಿದ್ದು, 3,700 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನೀರಿನ ಅಭಾವದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಮಾರಾಟ ದಂಧೆಗೆ ಕೂಡ ಹೆಚ್ಚಿದ್ದು ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ, ಟ್ಯಾಂಕರ್‌ಗಳನ್ನು ಖಾಸಗಿ ವ್ಯಕ್ತಿಗಳಿಂದ ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ನಗರದಲ್ಲಿ ನೀರಿನ ಸಮಸ್ಯೆ ಇರುವ ಕಡೆ 200 ರಿಂದ 300 ಟ್ಯಾಂಕರ್ ಬಳಸಿ ಉಚಿತವಾಗಿ ನೀರಿನ ಪೂರೈಕೆ ಮಾಡಲು ಬಿಬಿಎಂಪಿ, ಜಲ ಮಂಡಳಿ ನಿರ್ಧರಿಸಿದೆ. ಅದರಂತೆ, ಟ್ಯಾಂಕರ್‌ಗಳನ್ನು ಖಾಸಗಿ ವ್ಯಕ್ತಿಗಳಿಂದ ವಶಕ್ಕೆ ಪಡೆಯಲು ತೀರ್ಮಾನಿಸಲಾಗಿದೆ.