ಬೆಂಗಳೂರು : ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಆಗಮಿಸಿದ್ದು, ಈ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ. ಇದರಿಂದ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಹೆಚ್ಚಿನ ನೀರಿನ ಸಂಗ್ರಹವಾಗಿದೆ.
ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಜೂನ್ ಮೊದಲ ವಾರದಲ್ಲಿ 173 ಟಿಎಂಸಿ ನೀರು ಸಂಗ್ರಹವಾಗಿತ್ತು. 3460 ಸಾವಿರ ಕ್ಯೂಸೆಕ್ಸ್ ನೀರು ಒಳ ಹರಿವು ಹಾಗೂ 12,662 ಕ್ಯೂಸೆಕ್ಸ್ ನೀರು ಹೊರ ಹರಿವು ಇತ್ತು. ಆದರೆ, ಈಗ 190 ಟಿಎಂಸಿ ನೀರು ಸಂಗ್ರಹವಾಗಿದ್ದು, 15,680 ಕ್ಯೂಸೆಕ್ಸ್ ಒಳ ಹಾಗೂ 7,414 ಕ್ಯೂಸೆಕ್ ಹೊರ ಹರಿವು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಗಳಲ್ಲಿ 178 ಟಿಎಂಸಿ ನೀರು ಸಂಗ್ರಹವಾಗಿತ್ತು.
ಕೃಷ್ಣಾನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಭದ್ರಾ, ತುಂಗಭದ್ರಾ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಗೆ ಒಳ ಹರಿವು ಅಧಿಕವಾಗಿದೆ. ಈಗಾಗಲೇ 87 ಟಿಎಂಸಿ ನೀರು ಹರಿದು ಬಂದಿದೆ. ವಿದ್ಯುತ್ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಸೂಪಾ, ಲಿಂಗನಮಕ್ಕಿ ಹಾಗೂ ವರಾಹಿ ಜಲಾಶಯಗಳಿಗೆ 48 ಟಿಎಂಸಿ ಹಾಗೂ ಕಾವೇರಿ ಕೊಳ್ಳದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಿಗೆ 38 ಟಿಎಂಸಿ ನೀರು ಹರಿದು ಬಂದಿದೆ. ಒಟ್ಟಾರೆ ಮುಂಗಾರು ಆರಂಭವಾದ ಬಳಿಕ ರಾಜ್ಯದ ಜಲಾಶಯಗಳಲ್ಲಿ 16 ಟಿಎಂಸಿ ನೀರು ಸಂಗ್ರಹವಾಗಿದೆ.