ಬೆಳಗಾವಿ: ನಗರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮಾಜಿ ದೇವದಾಸಿಯರಿಂದ ಹಮ್ಮಿಕೊಂಡಿದ್ದ ಮತದಾನದ ಕುರಿತು ವಿಶೇಷ ಜಾಗೃತಿ ಜಾಥಾ ಗಮನ ಸೆಳೆಯಿತು.
ನಗರದ ಚನ್ನಮ್ಮ ವೃತ್ತದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಪಂ ಸಿಇಒ ರಾಹುಲ್ ಶಿಂಧೆ, ಮಂಗಳಮುಖಿಯರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡುವಂತೆ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲೂ ಸಣ್ಣ ರ್‍ಯಾಲಿ, ಕ್ಯಾಂಡಲ್ ಮಾರ್ಚ್ ಮತ್ತು ಮನೆ ಮನೆಗೂ ತೆರಳಿ ಮತದಾನದ ಮಹತ್ವ ತಿಳಿಸುತ್ತಿದ್ದೇವೆ. ಅದೇ ರೀತಿ, 2019 ಮತ್ತು 2021ರ ಚುನಾವಣೆಗಳಲ್ಲಿ ಎಲ್ಲೆಲ್ಲಿ ಕಡಿಮೆ ಮತದಾನ ಆಗಿದೆಯೋ ಅಲ್ಲೆಲ್ಲಾ ಪರೀಕ್ಷಿಸಿ, 339 ಮತಗಟ್ಟೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತೇವೆ. ಬೀದಿ ಬದಿ ವ್ಯಾಪಾರಿಗಳಲ್ಲೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ದಾಖಲಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸ್ವೀಪ್ ರಾಯಭಾರಿ ಚಿನ್ನು ತಳವಾರ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಮತದಾನದ ಜಾಗೃತಿ ಮೂಡಿಸಲು ಸ್ವೀಪ್ ರಾಯಭಾರಿಯಾಗಿ ನೇಮಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಸಮಾಜದಲ್ಲಿ ತೀರಾ ಹಿಂದುಳಿದಿರುವ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ನಮ್ಮ ಸಮುದಾಯವನ್ನು ಸರ್ಕಾರ ಮುಖ್ಯವೇದಿಕೆಗೆ ತರುತ್ತಿರುವುದು ಹರ್ಷ ತಂದಿದೆ. ಮೇ.6ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಈ ವೇಳೆ ಕೋರಿದರು.