ಆರತಕ್ಷತೆಯಲ್ಲಿ ವಧು - ವರನಿಂದ ಮತ ಜಾಗೃತಿ ಗಂಗಾವತಿ:ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿರುವ ಮತದಾನ ಪ್ರಕ್ರಿಯೆ ಬಗ್ಗೆ ಚುನಾವಣಾ ಆಯೋಗ, ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತವೆ. ಆದರೆ, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಈ ಜಾಗೃತಿ ಮೂಡಿಸುವ ಕೆಲಸ ಸಾಮಾಜಿಕ ಸೇವೆಯಾಗಿ ಪರಿವರ್ತನೆಯಾಗುತ್ತಿದೆ.
ನಗರದ ಗ್ರಾಮದ ದೇವತೆ ದುರ್ಗಾ ದೇವಸ್ಥಾನದ ಸಮುದಾಯ ಭವನದಲ್ಲಿ ಬುಧವಾರ ನಡೆದ ಮದುವೆ ಆರತಕ್ಷತೆಗೆ ಎಂದು ಬಂದಿದ್ದ ಆಪ್ತರು, ಹಿತೈಷಿಗಳು, ಬಂಧು-ಬಳಗ, ಸ್ನೇಹಿತರಿಗೆ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.
ನಗರಸಭೆ ಮಾಜಿ ಸದಸ್ಯ ಬಿ. ಅಶೋಕ್ ಟೈಗರ್ ಅವರ ಪುತ್ರಿ ಐಶ್ವರ್ಯ ಅವರ ವಿವಾಹವು ಆದೋನಿಯ ವೀರಾಂಜನೇಯ ಎಂಬುವವರೊಂದಿಗೆ ನಡೆದಿತ್ತು. ಬುಧವಾರ ಸಮುದಾಯ ಭವನದಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದು ನೂತನ ವಧು-ವರರು ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಮತದಾನ ಸಂಭ್ರಮವಾದಾಗ ದೇಶ ಬದಲಾಗುತ್ತದೆ, ನಮ್ಮ ದೇಶದ ಭವಿಷ್ಯವು ಮತದಾನದಲ್ಲಿ ಅಡಗಿದೆ. ದೇಶದ ನಿಜವಾದ ಪ್ರಜೆಯಾಗಿ ಮತಚಲಾಯಿಸಿ, ನಿಮ್ಮ ಮತ - ನಿಮ್ಮ ಧ್ವನಿ, ಒಟ್ಟಿಗೆ ಬನ್ನಿ ಮತಚಲಾಯಿಸಿ ಎಂಬ ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಲಾಯಿತು.
ಕೊಪ್ಪಳ ಜಿಲ್ಲಾ ಮತದಾನ ಜಾಗೃತಿ ರಾಯಭಾರಿ ಡಾ.ಶಿವಕುಮಾರ್ ಮಾಲಿಪಾಟೀಲ್ ಮಾತನಾಡಿ, "ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡಹಬ್ಬ ಚುನಾವಣೆ. ಹಬ್ಬದಲ್ಲಿ ಮತದಾನ ಮಾಡುವ ಮೂಲಕ ನಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ನಿಭಾಯಿಸಬೇಕು. ಮತವನ್ನು ತಪ್ಪದೇ ಪ್ರತಿಯೊಬ್ಬರು ಚಲಾಯಿಸಬೇಕು. ಮತದಾನದ ಸಂದರ್ಭದಲ್ಲಿ ಯಾವುದೇ ಆಮಿಷಕ್ಕೆ, ಒತ್ತಡಕ್ಕೆ ಒಳಗಾಗಬಾರದು. ಯೋಗ್ಯ ಎನಿಸಿದ ವ್ಯಕ್ತಿಗೆ ಮತದಾನ ಮಾಡುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ. ಮತದಾನದ ಮೂಲಕ ಸಂವಿಧಾನದ ಆಶಯ ಕಾಪಾಡಬೇಕು" ಎಂದರು.
ಇದನ್ನೂ ಓದಿ:ಮದುವೆ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ - Voting awareness