ಮಂಡ್ಯ:ಸಕ್ಕರೆ ನಾಡಿನಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತರಹೇವಾರಿ ಪುಸ್ತಕಗಳು ಕೈಬೀಸಿ ಕರೆಯುತ್ತಿದ್ದು, ಸಾಹಿತ್ಯಾಸಕ್ತರು ಅವುಗಳ ಖರೀದಿಯಲ್ಲಿ ತೊಡಗಿದ್ದಾರೆ. ಪುಸ್ತಕ ಮಾರಾಟ ಮಳಿಗೆಗೆ ಭೇಟಿ ನೀಡುತ್ತಿರುವ ಓದುಗರು, ರಿಯಾಯ್ತಿ ದರದಲ್ಲಿರುವ ಪುಸ್ತಕಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಸಾಹಿತ್ಯ ಸಮ್ಮೇಳನವೆಂದರೆ ಅಲ್ಲಿ ಪುಸ್ತಕಗಳ ಕಾರುಬಾರು ಸಾಮಾನ್ಯ. ಅದರಂತೆ ಸಕ್ಕರೆನಾಡಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತರಹೇವಾರು ಪುಸ್ತಕಗಳು ಸಾಹಿತ್ಯಾಸಕ್ತರನ್ನು ಕೇಂದ್ರೀಕರಿಸಿದವು. ಸಮ್ಮೇಳನಕ್ಕೆ ಆಗಮಿಸಿದ್ದ ಜನರು, ಗೋಷ್ಠಿ, ಕೃಷಿ ಪ್ರದರ್ಶನ ಬಳಿಕ ಸವಿಯಾದ ಊಟ ಸವಿದು ನೇರವಾಗಿ ಪುಸ್ತಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ತಮ್ಮಿಷ್ಟದ ಪುಸ್ತಗಳ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು. ರಿಯಾಯಿತಿ ದರದ ಪುಸ್ತಕಗಳ ಖರೀದಿ ಹೆಚ್ಚಾಗಿದೆ. ಸಾಹಿತ್ಯ ಆಸ್ತಕರು, ಶಾಲಾ ಮಕ್ಕಳು, ಶಿಕ್ಷಕರು ಪುಸ್ತಕ ಖರೀದಿಗೆ ಮುಗಿಬೀಳುತ್ತಿದ್ದು, ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಜನಸಾಗರವೇ ಹರಿದು ಬರುತ್ತಿದೆ.
ಸಮ್ಮೇಳನದ ಕುರಿತು ಸಾಹಿತ್ಯಾಸಕ್ತರು ಹೇಳಿದ್ದಿಷ್ಟು (ETV Bharat) ಸಮ್ಮೇಳನದಲ್ಲಿ 400ಕ್ಕೂ ಹೆಚ್ಚು ಪುಸ್ತಕ ಮಾರಾಟ ಮಳಿಗೆಗಳಿದ್ದು ಭಾಗಶಃ ಎಲ್ಲ ಮಳಿಗೆಗಳು ಸಂಪೂರ್ಣ ಭರ್ತಿಯಾಗಿದ್ದು ಕಂಡು ಬಂದವು. ಡಿಜಿಟಲ್ ತಂತ್ರಜ್ಞಾನದ ಮೂಲಕ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಹುಡುಕಿ ಜನರು ತಮಗೆ ಬೇಕಾದ ಪುಸ್ತಕಗಳ ಖರೀದಿಸುತ್ತಿದ್ದಾರೆ.
ಈಟಿವಿ ಭಾರತದ ಜೊತೆ ಮಾತನಾಡಿದ ಪುಸ್ತಕ ಮಳಿಗೆಯ ಮಾಲೀಕ ಹರ್ಷ, ಪುಸ್ತಕ ಖರೀದಿಗೆ ಆಗಮಿಸಿದ ಶಿಕ್ಷಕಿಯರಾದ ಪೂರ್ಣಿಮಾ, ಪದ್ಮಾವತಿ, ಪುಸ್ತಕ ಪ್ರೇಮಿ ಮಹೇಶ್ ಕುಮಾರ್ ಅವರು ಸಾಹಿತ್ಯ ಸಮ್ಮೇಳನದ ವಿಶೇಷತೆಯನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ.
ಪುಸ್ತಕಗಳ ಖರೀದಿಯಲ್ಲಿ ಸಾಹಿತ್ಯಾಸಕ್ತರು (ETV Bharat) ''ಪುಸ್ತಕ ಮಾರಾಟ ಮೇಳದ ಸ್ಟಾಲ್ಗಳನ್ನು ಬಹಳ ವ್ಯವಸ್ಥಿತವಾಗಿ ಮಾಡಿದ್ದಾರೆ. ಜನರು ಕೂಡ ನಿರೀಕ್ಷೆ ಮಟ್ಟದಲ್ಲಿ ಬರುತ್ತಿದ್ದಾರೆ. ಅದರಲ್ಲೂ ಪುಸ್ತಕ ಕೊಳ್ಳಲು ಆಸಕ್ತಿ ಇರುವವರು ಬರುತ್ತಿದ್ದಾರೆ. ಹೆಚ್ಚಿನವರು ಇದೇ ಪುಸ್ತಕಗಳು ಬೇಕು ಎಂದು ಕೇಳಿ ತೆಗೆದುಕೊಂಡು ಹೋಗುತ್ತಿದ್ದಾರೆ. ನಾವು ಇಲ್ಲಿ ಸಾವರ್ಕರ್ ಸಾಹಿತ್ಯ ಸಂಘ ಮತ್ತು ಸಮೃದ್ಧ ಸಾಹಿತ್ಯ ಪುಸ್ತಕ ಮಳಿಗೆಯನ್ನು ಇಟ್ಟಿದ್ದೇವೆ. ಇಲ್ಲಿ ಹೆಚ್ಚಾಗಿ ಸಾವರ್ಕರ್ ಕೃತಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಕೇವಲ ಎರಡು ಗಂಟೆಯಲ್ಲಿ 2,500 ಪುಸ್ತಕಗಳು ಖಾಲಿಯಾಗಿವೆ. ಈ ರೀತಿಯ ಸಮ್ಮೇಳನಗಳನ್ನು ಹೆಚ್ಚು ಮಾಡಬೇಕು. ಅವಾಗ ಜನ ಪುಸ್ತಕಗಳ ಕಡೆ ಮುಖ ಮಾಡುತ್ತಾರೆ. ಎಲ್ಲಾ ಕಡೆ ಪುಸ್ತಕಗಳ ಮೇಲೆ ರಿಯಾಯಿತಿ ನೀಡಲಾಗುತ್ತದೆ. ಹೀಗಾಗಿ ಜನರು ಕೂಡ ಪುಸ್ತಕಗಳನ್ನು ಹೆಚ್ಚು ಕೊಂಡುಕೊಳ್ಳತ್ತಿದ್ದಾರೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಪುಸ್ತಕದ ಎಲ್ಲಾ ಪ್ರಕಾಶಕರಿಗೂ ಖುಷಿ ಆಗುತ್ತದೆ. ಈ ರೀತಿಯ ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ನಡೆಯಬೇಕು. ರಾಜಕೀಯ ಏನೇ ಇರಲಿ, ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು'' ಎನ್ನುತ್ತಾರೆ ಪುಸ್ತಕ ಮಳಿಗೆಯ ಮಾಲೀಕ ಹರ್ಷ.
ಪುಸ್ತಕಗಳ ಖರೀದಿಯಲ್ಲಿ ಸಾಹಿತ್ಯಾಸಕ್ತರು (ETV Bharat) ''ಈ ಬಾರಿ ಆನ್ಲೈನ್ ಮೂಲಕ ನಮ್ಮ ಸ್ಟಾಲ್ ನಾವೇ ಬುಕ್ ಮಾಡುವ ರೀತಿಯಲ್ಲಿ ವ್ಯವಸ್ಥೆ ಮಾಡಿರುವುದು ವಿಶೇಷ. ಇಲ್ಲಿ ಒಟ್ಟು 460 ಪುಸ್ತಕ ಮಳಿಗೆಗಳಿವೆ. ಪುಸ್ತಕಕ್ಕೆ ಡಿಜಿಟಲ್ ಹೊಡೆತ ಆಗಿದೆ. ಅದರೆ, ಕೋವಿಡ್ ನಂತರ ಹಲವಾರು ಪುಸ್ತಕಗಳ ಮೇಲೆ ಒಲವು ಬೆಳೆಸಿಕೊಂಡಿದ್ದಾರೆ. ಡಿಜಿಟಲ್ನಲ್ಲಿ ಪುಸ್ತಕದ ವಿಮರ್ಶೆಗಳನ್ನು ನೋಡಿ ಅದೇ ಪುಸ್ತಕ ಕೇಳಿ ಬರುತ್ತಿದ್ದಾರೆ. ಹೀಗಾಗಿ ಅದರಿಂದ ಅನುಕೂಲವು ಆಗಿದೆ. ಇದು ಹೆಮ್ಮೆಯ ವಿಷಯ'' ಎನ್ನುತ್ತಾರೆ ಹರ್ಷ.
ಪುಸ್ತಕಗಳು ಹೆಚ್ಚು ಅನುಕೂಲ: ಶಿಕ್ಷಕಿಪೂರ್ಣಿಮಾ ಮಾತನಾಡಿ, ''ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಲಿ-ಕಲಿ ಎಂಬ ವಿಷಯವನ್ನು ಸ್ಟಾಲ್ ಒಂದರಲ್ಲಿ ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಮಕ್ಕಳು ಮತ್ತು ಶಿಕ್ಷಕರಿಗೆ ಪುಸ್ತಕ ಮೇಳ ಹೆಚ್ಚು ಉಪಯೋಗ. ನಾನು ಈ ಪುಸ್ತಕಮೇಳದಲ್ಲಿ 'ಸಚಿತ್ರ ರಾಮಾಯಣ' ಎನ್ನುವ ಪುಸ್ತಕ ತೆಗೆದುಕೊಂಡೆ. ಚಿತ್ರಗಳ ಸಹಿತ ರಾಮಾಯಣವನ್ನು ವಿವರಿಸಲಾಗಿದೆ. ಈ ಪುಸ್ತಕವನ್ನು ಸಾಕಷ್ಟು ಕಡೆ ಹುಡುಕಿದೆ. ಅದರೆ ಇಲ್ಲಿ ಸಿಕ್ಕಿದೆ'' ಎಂದು ಸಂತಸ ಹಂಚಿಕೊಂಡರು.
ಪುಸ್ತಕಗಳ ಖರೀದಿಯಲ್ಲಿ ಸಾಹಿತ್ಯಾಸಕ್ತರು (ETV Bharat) ಪುಸ್ತಕ ನೋಡುವವರ ಸಂಖ್ಯೆ 100, ಕೊಳ್ಳುವವರ ಸಂಖ್ಯೆ 3:ಪುಸ್ತಕ ಪ್ರೇಮಿ ಮಹೇಶ್ ಕುಮಾರ್ ಮಾತನಾಡಿ, ''ಮಂಡ್ಯದವರಿಗೆ ರಕ್ತಗತವಾಗಿ ಕನ್ನಡ ಅಭಿಮಾನ ಬಂದಿದೆ. ಪುಸ್ತಕ ಮೇಳದಲ್ಲಿ ಸಾಕಷ್ಟು ಪುಸ್ತಕ ಮಾರಾಟ ಮತ್ತು ಪ್ರದರ್ಶನ ನಡೆಯುತ್ತದೆ. ಆದರೆ, ಪುಸ್ತಕ ನೋಡಲು 100 ಜನ ಬಂದರೆ ಅದನ್ನು ಮೂರು ಜನ ಕೊಂಡುಕೊಂಡು ಹೋಗುತ್ತಿರುವುದು ಕಂಡು ಬೇಸರ ತರಿಸಿತು. ಅದು ಹಾಗೆ ಆಗಬಾರದು. 100 ಜನ ಪುಸ್ತಕ ನೋಡಿದರೆ ಅದರಲ್ಲಿ 70 ಜನವಾದರೂ ಪುಸ್ತಕ ತೆಗೆದುಕೊಂಡು ಹೋಗಬೇಕು. ನಾನು ಕೂಡ ಶಿವರಾಮ ಕಾರಂತರ 'ಮೂಕಜ್ಜಿಯ ಕನಸುಗಳು' ಮತ್ತು ಅಂಬೇಡ್ಕರ್ ಅವರ 'ಭೀಮಯಾನ' ಎಂಬ ಎರಡು ಪುಸ್ತಕಗಳನ್ನು ತೆಗೆದುಕೊಂಡಿದ್ದೇನೆ. ವೃತ್ತಿಯಲ್ಲಿ ನಾನು ಗಣಿತ ಶಿಕ್ಷಕನಾದರೂ ಕನ್ನಡ ಪುಸ್ತಕಗಳ ಮೇಲೆ ಒಲವು ಇದೆ'' ಎಂದು ತಮ್ಮ ಸಾಹಿತ್ಯ ಆಸಕ್ತಿ ಬಗ್ಗೆ ಹೇಳಿಕೊಂಡರು.
ಅಕ್ಷರ ಸಂತೆಯಲ್ಲಿ ಕಂಡು ಬಂದ ಪುಸ್ತಕಗಳು (ETV Bharat) ಇದನ್ನೂ ಓದಿ: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಭೂರಿ ಭೋಜನದ ವ್ಯವಸ್ಥೆ: ಇಲ್ಲಿದೆ ಮೆನು - SAHITYA SAMMELANA