ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ಕೇಂದ್ರದಿಂದ ಮತ್ತೊಂದು ಗಿಫ್ಟ್: ಹುಬ್ಬಳ್ಳಿ - ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಅಸ್ತು - Vande Bharat Express - VANDE BHARAT EXPRESS

ಹುಬ್ಬಳ್ಳಿ- ಪುಣೆ ಮಧ್ಯೆ ವಂದೇ ಭಾರತ್ ರೈಲು ಸೇವೆಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಅವರು ತಿಳಿಸಿದ್ದಾರೆ.

ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಅಸ್ತು
ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಅಸ್ತು (ETV Bharat)

By ETV Bharat Karnataka Team

Published : Sep 9, 2024, 10:17 PM IST

ಹುಬ್ಬಳ್ಳಿ:ಗಣೇಶ ಹಬ್ಬದ ವೇಳೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮತ್ತೊಂದು ಭರ್ಜರಿ ಕೊಡುಗೆ ನೀಡಿದೆ. ಹಬ್ಬಕ್ಕೂ ಮುನ್ನ ರೈತರಿಗೆ ಹೆಸರು, ಉದ್ದು, ಸೋಯಾಬಿನ್, ಸೂರ್ಯಕಾಂತಿಗೆ ಬೆಂಬಲ ಬೆಲೆ ಘೋಷಿಸಿದ್ದ ಮೋದಿ ಸರ್ಕಾರ, ಇದೀಗ ಹುಬ್ಬಳ್ಳಿ - ಪುಣೆ ಮಧ್ಯೆ ವಂದೇ ಭಾರತ್ ರೈಲು ಪ್ರಕಟಿಸುವ ಮೂಲಕ ಹಬ್ಬದ ಸಂತಸವನ್ನು ದುಪ್ಪಟ್ಟು ಮಾಡಿದೆ.

ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಅವರ ಪ್ರಸ್ತಾವನೆಗೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹುಬ್ಬಳ್ಳಿ- ಪುಣೆ ಮಧ್ಯೆ ಎರಡನೇ ವಂದೇ ಭಾರತ್ ರೈಲು ಆರಂಭಿಸುವ ಶುಭ ಸಂದೇಶ ನೀಡಿದ್ದಾರೆ.

ಅತಿ ಶೀಘ್ರದಲ್ಲೇ ಹುಬ್ಬಳ್ಳಿ - ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಅವರಿಗೆ ಮಾಹಿತಿ ನೀಡಿದ್ದಾರೆ.

ವಂದೇ ಭಾರತ್​​​ಗೆ ಮನವಿ ಮಾಡಿದ್ದ ಜೋಶಿ:ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಅವರು ಹುಬ್ಬಳ್ಳಿ- ಪುಣೆ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕಾಗಿ ಮತ್ತೊಂದು ವಂದೇ ಭಾರತ್​ ರೈಲು ಬಿಡುಗಡೆಗೆ ಅಶ್ವಿನ್ ವೈಷ್ಣವ್ ಅವರಿಗೆ ಜುಲೈ ಮೊದಲ ವಾರದಲ್ಲಿ ಪತ್ರ ಬರೆದು ಮನವಿ ಮಾಡಿದ್ದರು.

ರಾಜ್ಯದಲ್ಲಿ ಬೆಂಗಳೂರು ನಂತರ ಪ್ರಮುಖ ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆ ಹುಬ್ಬಳ್ಳಿ - ಧಾರವಾಡ ಅವಳಿ ನಗರಕ್ಕಿದೆ. ಅಲ್ಲದೇ, ವಂದೇ ಭಾರತ್ ರೈಲು ಸಂಚಾರದಿಂದ ಈ ಭಾಗದ ವಾಣಿಜ್ಯೋದ್ಯಮ, ಕೈಗಾರಿಕಾ ವಸಾಹತು ಬೆಳವಣಿಗೆಗೆ ಅನುಕೂಲ ಆಗುತ್ತದೆ ಎಂದು ಸಚಿವ ಜೋಶಿ ಕೇಂದ್ರದ ಗಮನ ಸೆಳೆದಿದ್ದರು. ಹುಬ್ಬಳ್ಳಿಯಿಂದ ಮುಂಬೈ ಸಂಪರ್ಕಕ್ಕೂ ಈ ಮಾರ್ಗ ಅತ್ಯಂತ ಪ್ರಮುಖವಾಗಲಿದೆ ಎಂಬುದನ್ನು ಜೋಶಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ವಂದೇ ಭಾರತ್ ರೈಲು ಸಂಚಾರ ಆರಂಭಕ್ಕೆ ಒತ್ತಾಯಿಸಿದ್ದರು.

ಹುಬ್ಬಳ್ಳಿ - ಧಾರವಾಡದ ಜನರಿಗೆ ಹಬ್ಬದ ಈ ಶುಭ ಸಂದರ್ಭದಲ್ಲಿ ವಂದೇ ಭಾರತ್ ರೈಲು ಸಂಚಾರ ಸಿಹಿ ಸುದ್ದಿಯಾಗಿದ್ದು, ಶೀಘ್ರದಲ್ಲಿಯೇ ಹುಬ್ಬಳ್ಳಿ- ಪುಣೆ ನಡುವೆ ಹುಬ್ಬಳ್ಳಿಯ ಎರಡನೇಯ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸಂಚರಿಸಲಿದೆ ಎಂದು ಸಚಿವ ಪ್ರಲ್ಹಾದ್​​ ಜೋಶಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ರೈಲು ಸಂಚಾರದ ಉದ್ಘಾಟನೆ ದಿನ ಮತ್ತು ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಆದಷ್ಟು ಬೇಗನೆ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ, ರೈಲ್ವೆ ಸಚಿವರಿಗೆ ಧನ್ಯವಾದ:ನಮ್ಮ ವಿಭಾಗದ ರೈಲ್ವೆ ಅಭಿವೃದ್ಧಿಗೆ, ವಿಕಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನ್​ ವೈಷ್ಣವ್ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಉತ್ತರ ಕರ್ನಾಟಕ ಜನರ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಸಚಿವ ಪ್ರಲ್ಹಾದ್​​ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದೆ ವಂದೇಭಾರತ್ ಸ್ಲೀಪರ್; ರೈಲಿನಲ್ಲಿ ಸ್ನಾನ ಸೌಲಭ್ಯ, ಹಲವು ವೈಶಿಷ್ಟ್ಯಗಳು! - Vande Bharat Sleeper Train

ABOUT THE AUTHOR

...view details