ಬೆಳಗಾವಿ :ಬೆಂಗಳೂರಿಗೆ ನೀಡಿದಷ್ಟೇ ಹೆಚ್ಚಿನ ಆದ್ಯತೆಯನ್ನ ಬೆಳಗಾವಿಗೂ ಕೊಡುತ್ತೇವೆ. ಬೆಳಗಾವಿ ಸೇರಿ ರಾಜ್ಯಾದ್ಯಂತ 39 ಸಾವಿರ ಕೋಟಿ ರೂ. ಅನುದಾನದಲ್ಲಿ ರೈಲ್ವೆ ಕಾಮಗಾರಿಗಳ ಕೆಲಸ ಆರಂಭಿಸಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು.
ಬೆಳಗಾವಿ - ಧಾರವಾಡ ನೇರ ರೈಲ್ವೆ ಮಾರ್ಗ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗ ದಿ. ಸುರೇಶ್ ಅಂಗಡಿ ಅವರ ಕನಸಾಗಿದೆ. ರೈಲು ಹಳಿ ನಿರ್ಮಾಣಕ್ಕೆ ಒಟ್ಟು 888 ಎಕರೆ ಜಮೀನು ಬೇಕಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ 660 ಎಕರೆ, ಧಾರವಾಡದಲ್ಲಿ 228 ಎಕರೆ ಜಮೀನು ಬೇಕು. 446 ಎಕರೆ ಜಮೀನನ್ನು ಮುಂದಿನ ತಿಂಗಳು ಹಸ್ತಾಂತರ ಮಾಡುವ ಬಗ್ಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದರು.
ಈ ಮಾರ್ಗ ಸುಮಾರು 73 ಕಿ.ಮೀ ವ್ಯಾಪ್ತಿ ಹೊಂದಿದ್ದು, ಧಾರವಾಡದ ಕ್ಯಾರಕೊಪ್ಪದಿಂದ ಬೆಳಗಾವಿ ದೇಸೂರದವರೆಗೆ ರೈಲು ಹಳಿ ಮಾಡುವ ಗುರಿ ಇದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅಭಿವೃದ್ಧಿ ಮಾಡಬಹುದು. ಜಿಲ್ಲಾಧಿಕಾರಿಗಳು ಒಂದು ವರ್ಷದ ಕೆಲಸವನ್ನ ಒಂದು ತಿಂಗಳಲ್ಲಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಜನವರಿ, ಫೆಬ್ರವರಿಯಲ್ಲಿ ಭೂಸ್ವಾಧೀನಪಡಿಸಿಕೊಂಡು ಕಾಮಗಾರಿ ಆರಂಭಿಸುತ್ತೇವೆ. ಬೆಳಗಾವಿ-ಧಾರವಾಡ ರೈಲು ಮಾರ್ಗದ ಕೆಲಸವನ್ನು 18 ರಿಂದ 20 ತಿಂಗಳಲ್ಲಿ ಮುಗಿಸಲಾಗುವುದು. ಜಿಲ್ಲಾಧಿಕಾರಿಗಳ ಜೊತೆ ಸೇರಿಕೊಂಡು ಕೆಲಸ ಮಾಡುವಂತೆ ನಮ್ಮ ಅಧಿಕಾರಿಗಳಿಗೆ ತಿಳಿಸುತ್ತೇನೆ. ರಾಜ್ಯದಲ್ಲಿ 11 ಯೋಜನೆಗಳು ಬಾಕಿ ಇದ್ದವು. ಅದರಲ್ಲಿ 9 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. 39 ಸಾವಿರ ಕೋಟಿ ಅನುದಾನ ಒದಗಿಸಿದ್ದೇವೆ. 50 ವರ್ಷದಲ್ಲಿ ಆಗದೆ ಇರುವ ಕೆಲಸಗಳನ್ನು ಈ 10 ವರ್ಷದಲ್ಲಿ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ಧಾರವಾಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜೊತೆಗೂ ಮಾತಾಡಿದ್ದೇನೆ. ₹950 ಕೋಟಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಜಂಟಿ ಸರ್ವೇ, ಗಡಿ ನಿಗದಿಯಾಗಿದೆ. ಸ್ಟೇಶನ್ಗಳನ್ನು ಎಲ್ಲೆಲ್ಲಿ ನಿರ್ಮಿಸಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ. ಬೆಳಗಾವಿ ತಾಲೂಕಿನ ಕೆಕೆಕೊಪ್ಪ, ಬಡಾಲ ಅಂಕಲಗಿ, ನಾಗೇನಟ್ಟಿ, ನಂದಿಹಳ್ಳಿ, ಗರ್ಲಗುಂಜಿ ಸೇರಿ ಮತ್ತಿತರ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಮೀನು ತೆಗೆದುಕೊಳ್ಳುವ ಕೆಲಸ ಡಿಸಿ ಮಾಡಿದ್ದಾರೆ. ಅಲ್ಲದೆ ಬೆಳಗಾವಿ ಹೃದಯ ಭಾಗದಲ್ಲಿ 11ನೇ ಕ್ರಾಸ್ನಲ್ಲಿ 6 ಆರ್.ಒ.ಬಿ ಮತ್ತು ಆರ್.ಯು.ಬಿ ತೆರೆಯಲು ನಿರ್ಧರಿಸಲಾಗಿದ್ದು, ಒಟ್ಟಾರೆ ಬೆಳಗಾವಿಗೆ ಪ್ರಧಾನಿ ಮೋದಿ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು.