ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ; ಮೊದಲು ದಾಖಲೆ ಬಿಡುಗಡೆ ಮಾಡಲಿ ಎಂದು ಪ್ರಲ್ಹಾದ್ ಜೋಶಿ ಸವಾಲು - UNION MINISTER PRALHAD JOSHI

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಬಿಜೆಪಿಯಿಂದ ಕಾಂಗ್ರೆಸ್​ ಶಾಸಕರಿಗೆ 100 ಕೋಟಿ ಆಫರ್ ಆರೋಪದ ಕುರಿತು ಮಾತನಾಡುತ್ತಾ, ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.

union-minister-pralhad-joshi
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ETV Bharat)

By ETV Bharat Karnataka Team

Published : Nov 18, 2024, 4:06 PM IST

ಹುಬ್ಬಳ್ಳಿ :ಕಾಂಗ್ರೆಸ್ ಶಾಸಕರಿಗೆ ಯಾರು 100 ಕೋಟಿ ಆಫರ್ ಕೊಟ್ಟಿದ್ದಾರೆ? ದಾಖಲೆ ಬಿಡುಗಡೆ ಮಾಡಿ ಎಂದು ಹೇಳಿ. ಅವರು ಡೈವರ್ಟ್​ ಮಾಡುವುದಕ್ಕೆ ಈ ರೀತಿ ಏನೇನೋ ಆರೋಪಗಳನ್ನ ಮಾಡ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಬರೀ ಬಾಯಿ ಮಾತಿನಲ್ಲಿ ಹೇಳಬೇಡಿ. ಯಾವ ಬಿಜೆಪಿ ನಾಯಕರು ಆಫರ್ ಕೊಟ್ಟಿದ್ದಾರೆ? ಎಂಬ ಬಗ್ಗೆ ಮೊದಲು ದಾಖಲೆ ನೀಡಿ ನೋಡೋಣ ಎಂದು ಸವಾಲೆಸೆದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದರು (ETV Bharat)

ಹಗರಣಗಳಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ. ಅದರಂತೆ ಲೋಕಾಯುಕ್ತ ವಿಚಾರಣೆ ನಡೆದಿದೆ. ಇದೆಲ್ಲಾ ಡೈವರ್ಟ್ ಮಾಡಲು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಹೀಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ವಿರುದ್ಧದ ತನಿಖೆ ಆದೇಶಕ್ಕೆ ಕೋರ್ಟ್​ನಿಂದ ತಡೆಯಾಜ್ಞೆ ಸಿಕ್ಕಿಲ್ಲ. ನಿಮ್ಮ ವಿರುದ್ಧವೇ ಕೋರ್ಟ್ ಕೇಸ್ ಇದೆ. ಅಂಥದ್ದರಲ್ಲಿ ಮತ್ತೊಬ್ಬರ ಬಗ್ಗೆ ಮಾತನಾಡುತ್ತೀರಿ ಎಂದರು.

ಭಾರತ ಸರ್ಕಾರ ಕ್ರಮ ಕೈಗೊಳ್ಳಲಿದೆ : 100 ಕೋಟಿ ಇರಲಿ, 500 ಕೋಟಿ ಆಫರ್ ಇರಲಿ, ದಾಖಲೆ ಇದ್ದರೆ ಬಿಡುಗಡೆ ಮಾಡಿ. ಕಾಂಗ್ರೆಸ್ ಶಾಸಕರಿಗೆ ಯಾರೂ 50 ಕೋಟಿ, 100 ಕೋಟಿ, 500 ಕೋಟಿ ಆಫರ್ ಎಂದೆಲ್ಲಾ ಮಾತನಾಡಿದ್ದಾರೋ ಅವರ ಮೇಲೆ ಭಾರತ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಜೋಶಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಕಳುಹಿಸಿದ್ದರು: ಹಿಂದೆ ಬಿಜೆಪಿ ಸರ್ಕಾರ ರಚಿಸುವಾಗ ಇದೇ ಸಿದ್ದರಾಮಯ್ಯ ಅವರೇ ತಮ್ಮ ಆಪ್ತ ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದರು ಎಂದು ಜೋಶಿ ಇದೇ ವೇಳೆ ಬಹಿರಂಗಪಡಿಸಿದರು.

ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಜತೆ ಸರ್ಕಾರ ರಚನೆ ಇಷ್ಟವಿರಲಿಲ್ಲ. ಹಾಗಾಗಿ ತಾವೇ ಮುಂದೆ ನಿಂತು ಕೆಲ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕಳಿಸಿದ್ದರು. ಕಳೆದ ಬಾರಿ ಆಪರೇಷನ್ ಕಮಲ ನಡೆಸಲು ಕಾರಣ ರಾಜ್ಯದಲ್ಲಿ ಅತಂತ್ರ ಸ್ಥಿತಿಯತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಜನ ಕಾಂಗ್ರೆಸ್​ಗೆ ಬಹುಮತದ ಅಧಿಕಾರ ಕೊಟ್ಟಿದ್ದಾರೆ. ಹಾಗಿದ್ದಾಗ ನಾವೇಕೆ ಮೂಗು ತೂರಿಸೋಣ? ಎಂದು ಹೇಳಿದರು.

5 ವರ್ಷ ವಿಪಕ್ಷದಲ್ಲಿ ಇರಲು ಬಿಜೆಪಿ ಸ್ಪಷ್ಟ ನಿರ್ಧಾರ:ರಾಜ್ಯದಲ್ಲಿ 5 ವರ್ಷ ವಿರೋಧ ಪಕ್ಷ ಸ್ಥಾನದಲ್ಲಿ ಇರಲು ಬಿಜೆಪಿ ಸ್ಪಷ್ಟ ನಿಲುವು ತೋರಿದೆ. ವಿಪಕ್ಷದಲ್ಲಿದ್ದು ಜನಪರವಾಗಿ ರಚನಾತ್ಮಕ ಕಾರ್ಯ ಕೈಗೊಳ್ಳುವಂತೆ ನಮ್ಮ ಹೈಕಮಾಂಡ್ ಸಹ ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಷಡ್ಯಂತ್ರ ಇದೆಲ್ಲ : ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ನಾವು ಉರುಳಿಸುವುದೂ ಇಲ್ಲ. ಮತ್ತೆ ಆಪರೇಷನ್ ಕಮಲ ನಡೆಸುವುದೂ ಇಲ್ಲ. ಕಾಂಗ್ರೆಸ್​ನವರು ತಮ್ಮ ಹುಳುಕು ಮುಚ್ಚಿಕೊಳ್ಳಲು ಮಾಡುತ್ತಿರುವ ಷಡ್ಯಂತ್ರ ಇದೆಲ್ಲ ಎಂದು ಆರೋಪಿಸಿದರು. ಶಾಸಕ ರವಿ ಗಾಣಿಗ ಅವತ್ತಿನಿಂದ ಹೇಳುತ್ತಿದ್ದಾರೆ. ಆದರೆ, ಇನ್ನೂ ಏಕೆ ದಾಖಲೆ ಬಿಡುಗಡೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ :ರಾಜ್ಯ ಸರ್ಕಾರ ಅಚಾನಕ್ಕಾಗಿ ​ಕಾರ್ಡ್​ಗಳನ್ನ ಯಾಕೆ ರದ್ದುಮಾಡುತ್ತಿದೆ ಎಂಬುದು ಗೊತ್ತಿಲ್ಲ - ಪ್ರಲ್ಹಾದ್ ಜೋಶಿ

ABOUT THE AUTHOR

...view details