ಹುಬ್ಬಳ್ಳಿ:ಕಾಂಗ್ರೆಸ್‌ನ ಬಾಲಿಶತನಕ್ಕೆ ಒಂದು ಮಿತಿ ಇರಬೇಕು. ನಾನೂ 30 ವರ್ಷಗಳಿಂದ ಪರಿಶುದ್ಧ ರಾಜಕಾರಣ ಮಾಡುತ್ತ ಬಂದಿದ್ದೇನೆ. ರೈಲ್ವೆ ಜಾಗದ ಟೆಂಡರ್ ಕುರಿತು ಸುರ್ಜೇವಾಲ ಅವರದು ಅತ್ಯಂತ ಬಾಲಿಶವಾದ ಹೇಳಿಕೆ. ಅವರು ಈ ಬಗ್ಗೆ ದಾಖಲೆಗಳನ್ನು ಕೊಡಬೇಕು. ಇಲ್ಲವಾದರೆ ನಾನೂ ಕಾನೂನಿನ ಮುಖಾಂತರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರೈಲ್ವೆ ಜಾಗಕ್ಕೆ ಇಲ್ಲಿಯವರೆಗೂ ಐದು ಬಾರಿ ಟೆಂಡರ್ ಕರೆಯಲಾಗಿದೆ. ಯಾರೂ ಸಹ ಇದರಲ್ಲಿ ಭಾಗಿಯಾಗಿಲ್ಲ. ಈಗ ಮತ್ತೆ ಟೆಂಡರ್ ಕರೆಯಲಾಗಿದೆ. ನೀವು ಸಹ ಟೆಂಡರ್‌ನಲ್ಲಿ ಭಾಗಿಯಾಗಬಹುದು. ಕಾಂಗ್ರೆಸ್‌ನವರ ಬಳಿ ಸಾಕಷ್ಟು ಭ್ರಷ್ಟಾಚಾರದ ಹಣ ಇದೆ. ಅದರ ಮುಖಾಂತರ ನೀವು ಟೆಂಡರ್‌ನಲ್ಲಿ ಭಾಗಿಯಾಗಬಹುದು. ನಿಮ್ಮ ಹಾಗೆ ಕಲ್ಲಿದ್ದಲಿನಲ್ಲಿ ಚೀಟಿ ಬರೆದು ಟೆಂಡರ್ ಕರೆದಿಲ್ಲ" ಎಂದರು.
"ಆನ್ಲೈನ್ ಮುಖಾಂತರ ಟೆಂಡರ್ ಕರೆಯಲಾಗಿದೆ. ಇದರಲ್ಲಿ ನಯಾಪೈಸೆಯ ಭ್ರಷ್ಟಾಚಾರ ಇಲ್ಲ. ಭ್ರಷ್ಟಾಚಾರಕ್ಕೆ ನಮ್ಮ ಸರ್ಕಾರ ಅವಕಾಶ ಮಾಡಿಕೊಡುವ ಮಾತೇ ಇಲ್ಲ. ಸುರ್ಜೆವಾಲ ಅವರಿಗೆ ಮೊದಲಿಗೆ ಹರಿಯಾಣವನ್ನು ಸಂಭಾಳಿಸಿ ಬಾ ಎಂದು ಹೇಳಿ. ನೂರು ಕೋಟಿ ರೂಪಾಯಿಗೆ ಒಂದು ಎಕರೆ ಖರೀದಿ, ಮುಂಬೈ ಹಾಗೂ ಬೆಂಗಳೂರಿನಂತ ಮಹಾನಗರಗಳಲ್ಲಿಯೇ ನಡೆದಿಲ್ಲ. ಈ ಬಗ್ಗೆ ಸ್ಥಳೀಯ ಕಾರ್ಯಕರ್ತರು ಸುರ್ಜೇವಾಲ ಅವರನ್ನು ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೊದಲು ಸಂಪೂರ್ಣ ಮಾಹಿತಿ ತಿಳಿದುಕೊಂಡು ಮಾತನಾಡಬೇಕು" ಎಂದು ಅವರು ಕಿಡಿಕಾರಿದರು.