ಬೆಂಗಳೂರು: ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ಈ ರೀತಿಯ ರಾಜಕೀಯದ ಬಿಸಿ ಎಂದೂ ಸಹ ಉದ್ಭವಿಸಿರಲಿಲ್ಲ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೇಲೆ ಈ ಹಿಂದೆ ಈ ರೀತಿ ನಡೆಯುತ್ತಿತ್ತು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಆಡಳಿತವನ್ನು ಯಾವ ರೀತಿ ದುರ್ಬಳಕೆ ಮಾಡುತ್ತಿದ್ದಾರೆ, ಅಧಿಕಾರಿಗಳು ಯಾವ ರೀತಿ ಕೆಳ ಅಂತಕ್ಕೆ ಇಳಿದು ಸರ್ಕಾರದ ಆದೇಶಗಳನ್ನು ಪಾಲನೆ ಮಾಡುತ್ತಿದ್ದಾರೆ ಎನ್ನುವುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ವಿಶೇಷವಾಗಿ ಪೊಲೀಸ್ ಇಲಾಖೆ. ನಮ್ಮ ರಾಜ್ಯದಲ್ಲಿ ಹೊಸ ರೀತಿಯ ಪೊಲೀಸ್ ಇಲಾಖೆಯ ಕಾರ್ಯ ಪ್ರಾರಂಭ ಮಾಡಿದ್ದಾರೆ. ಈ ಸರ್ಕಾರದ ಕಾರ್ಯವೈಖರಿ ಮುಂದೆ ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ. ಬಹುಶಃ ಕಾಲವೇ ನಿರ್ಧರಿಸುತ್ತದೆ. ಮುಖ್ಯಮಂತ್ರಿಗಳು ಹಾಗೂ ಅವರ ಮಂತ್ರಿಮಂಡಲದ ಸದಸ್ಯರು ಪ್ರತಿನಿತ್ಯ ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಮಾತನಾಡಿದ್ದಾರೆ. ಇದೆನಾ ಇವರ ಕೆಲಸ? ಇವರೆಲ್ಲ ಸಂವಿಧಾನದ ರಕ್ಷಕರು. ರಾಜ್ಯಪಾಲರನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದೂ ಸಹ ಆರೋಪ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ರಾಜ್ಯಪಾಲರ ಕಾರ್ಯವೈಕರಿ ಬಗ್ಗೆ ನಾವು ಯಾರು ಪ್ರಶ್ನೆ ಮಾಡಬಾರದು. ಅದು ಸಂವಿಧಾನಕ್ಕೆ ಮಾಡುವ ಅಪಚಾರ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿರುವ ಹಳೆಯ ಆಡಿಯೋ ಕ್ಲಿಪಿಂಗ್ ಅನ್ನು ಈ ಸಂದರ್ಭದಲ್ಲಿ ಕುಮಾರಸ್ವಾಮಿ ಪತ್ರಕರ್ತರ ಮುಂದೆ ಪ್ರದರ್ಶನ ಮಾಡಿದರು.
ಕ್ಯಾಬಿನೆಟ್ನಲ್ಲಿ ತರಾತುರಿ ನಿರ್ಧಾರ: ಸರ್ಕಾರದ ಅಂಗ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು, ಸಂಸ್ಥೆಗಳ ಮೇಲೆ ಒತ್ತಡ ತರುತ್ತಿರುವುದು ಇವತ್ತಿನದ್ದಲ್ಲ. ದೇಶದಲ್ಲಿ ಹಲವಾರು ಉದಾಹರಣೆಗಳನ್ನು ಕೊಡಬಹುದು. ಆದರೆ, ನಾವು ಅಧಿಕಾರದಲ್ಲಿದ್ದಾಗ ಸಂವಿಧಾನಕ್ಕೆ ಅಪಚಾರ ಬರದಂತೆ ಗೌರವ ಕೊಟ್ಟು ನಡೆದಿದ್ದೇವೆ. ಅದನ್ನು ಈಗಿನ ಮುಖ್ಯಮಂತ್ರಿಗಳು ಮೊದಲು ಅರ್ಥಮಾಡಿಕೊಳ್ಳಬೇಕು. ರಾಜ್ಯಪಾಲರಿಂದ ಪತ್ರಗಳು ಬಂದರೆ ಮುಖ್ಯಕಾರ್ಯದರ್ಶಿ ಆದಿಯಾಗಿ ಯಾರು ಉತ್ತರ ಕೊಡಬಾರದು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಅದನ್ನು ಕ್ಯಾಬಿನೆಟ್ ಮುಂದೆ ತರಬೇಕು ಎಂದು ತೀರ್ಮಾನಗಳನ್ನು ಹೊಸದಾಗಿ ಮಾಡಿಕೊಂಡಿದ್ದಾರೆ. ಕಳೆದ 14 ತಿಂಗಳಲ್ಲಿ ನಡೆದಿರುವ ಕ್ರಮಗಳು, ಅಧಿಕಾರ ದುರುಪಯೋಗ ಎಲ್ಲವೂ ಹೊರಗೆ ಬರಬಾರದೆಂದು ಕ್ಯಾಬಿನೆಟ್ನಲ್ಲಿ ತರಾತುರಿಯಲ್ಲಿ ನಿರ್ಧಾರಗಳನ್ನು ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸುಮ್ಮ ಸುಮ್ಮನೆ ರಾಜೀನಾಮೆ ಕೊಡಕ್ಕೆ ನನಗೆ ತಲೆ ಕೆಟ್ಟಿದ್ಯಾ? ರಾಜೀನಾಮೆ ಏಕೆ ಕೊಡಬೇಕು? ನಾನೇನಾದೂ ತಪ್ಪು ಮಾಡಿದ್ದಿನಾ? ಅವಶ್ಯಕತೆ ಬಂದಾಗ ರಾಜೀನಾಮೆ ಕೊಡುವೆ ಎಂದರು.