ಬೆಂಗಳೂರು: ''ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಕೆಂಪೇಗೌಡರು ಕಟ್ಟಿದ ನಾಡನ್ನು ಪೀಸ್ ಪೀಸ್ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ'' ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ರಾತ್ರಿ ಅವರು ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಸಭೆಯಲ್ಲಿ ಪಾಲ್ಗೊಂಡರು. ''ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಂಪೇಗೌಡರು ಕಟ್ಟಿದ ನಾಡನ್ನು ಏಳು ಪೀಸ್ ಮಾಡಲು ಹೊರಟಿದ್ದಾರೆ. ಈ ಸಂಬಂಧ ಬಿಲ್ ಯಾವ ರೀತಿ ಮಂಡಿಸುತ್ತಾರೆ ಎಂಬುದನ್ನು ನೋಡೋಣ'' ಎಂದರು.
''ಇಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಎರಡು ಪಕ್ಷಗಳ ಶಾಸಕರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಲ್ಲರೂ ಜೊತೆಗೂಡಿ ಸಭೆ ನಡೆಸಿದ್ದೇವೆ. ವಿಧಾನಸಭಾ ಅಧಿವೇಶನದ ಬಗ್ಗೆ ಚರ್ಚೆಯಾಗಿದೆ. ಬಜೆಟ್ ನಂತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿದೆ'' ಎಂದು ಹೇಳಿದರು.
''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಕೆಪಿಎಸ್ಸಿ ಅಕ್ರಮ, ಮೈಕ್ರೋ ಫೈನಾನ್ಸ್ ಬಗ್ಗೆ, ಬಾಣಂತಿಯರ ಸಾವು, ರೈತರು ಸಂಕಷ್ಟಕ್ಕೆ ಒಳಗಾಗಿದ್ದರೂ ಪರಿಹಾರ ಸಿಗದಿರುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಬೆಂಗಳೂರಿನ ಅಭಿವೃದ್ದಿ ಕುಂಠಿತ ಆಗಿದೆ. ಮೆಟ್ರೋ ದರ ಹೆಚ್ಚಳ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಅಧಿವೇಶನದಲ್ಲಿ ಎರಡೂ ಪಕ್ಷಗಳು ಒಟ್ಟಿಗೆ ಹೋರಾಟ ಮಾಡಲಿವೆ'' ಎಂದು ತಿಳಿಸಿದರು.
ಬಿಜೆಪಿ ಸಂಸದರು, ಶಾಸಕರಿಂದ ಸಿಎಂ ಭೇಟಿ- ಬಿ.ವೈ.ವಿಜಯೇಂದ್ರ:ಇನ್ನೊಂದೆಡೆ, ಬಿಜೆಪಿ ನಾಯಕರ ಸಭೆ ಬಳಿಕ ಮಾತನಾಡಿದಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬೆಂಗಳೂರಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ 28ರಂದು ನಮ್ಮೆಲ್ಲ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಣಕಾಸಿನ ಸಚಿವರೂ ಆದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ'' ಎಂದು ತಿಳಿಸಿದ್ದಾರೆ.
''ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹೆಚ್ಚು ಅನುದಾನ ನೀಡಬೇಕೆಂದು ಒತ್ತಾಯಿಸಿ ಮನವಿ ನೀಡುತ್ತೇವೆ ಎಂದು ಹೇಳಿದರು. ಬೆಂಗಳೂರಿನ ಜ್ವಲಂತ ಸಮಸ್ಯೆಗಳ ಕುರಿತು ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದ್ದು, ಅದರ ಬಗ್ಗೆಯೂ ಚರ್ಚೆ ಆಗಿದೆ ಎಂದರು. ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ಆಗಬೇಕು. ಗ್ರೇಟರ್ ಬೆಂಗಳೂರು ಪ್ರಸ್ತಾಪ ಕೈಬಿಡಬೇಕು. ಟನೆಲ್ ರಸ್ತೆ ಯೋಜನೆ ಕೈಬಿಟ್ಟು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಸರಕಾರ ಚಿಂತಿಸಬೇಕಿದೆ'' ಎಂದು ಒತ್ತಾಯಿಸಿದರು.