ಮಂಗಳೂರು:ಉಳ್ಳಾಲ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ವೋರ್ವರ ಹತ್ಯೆಗೆ ಯತ್ನಿಸಿದ್ದ ಇಬ್ಬರು ಅಪರಾಧಿಗಳಿಗೆ ಇಲ್ಲಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು ತಲಾ 16 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಉಳ್ಳಾಲದ ನಿವಾಸಿಗಳಾದ ಮುಸ್ತಾಕ್ (32) ಮತ್ತು ಜಾಕೀರ್ (36) ಶಿಕ್ಷೆಗೊಳಗಾದವರು. ಪ್ರಕರಣದ 2ನೇ ಆರೋಪಿ ಯಾಸೀನ್ ಮತ್ತು 3ನೇ ಆರೋಪಿ ಅಶ್ರಫ್(50) ತಲೆಮರೆಸಿಕೊಂಡಿದ್ದಾರೆ.
ಪ್ರಕರಣವೇನು?: 2015ರ ಡಿ.17ರ ರಾತ್ರಿ ನಾಲ್ವರು ಆರೋಪಿಗಳು ಉಳ್ಳಾಲದ ಸಾರ್ವಜನಿಕ ಸ್ಥಳದಲ್ಲಿ ಬಾಟಲಿಗಳನ್ನು ಎಸೆದು ಗಲಾಟೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಠಾಣೆಯ ಆಗಿನ ಹೆಡ್ ಕಾನ್‌ಸ್ಟೇಬಲ್ ಉಮೇಶ್ ಮತ್ತು ಕಾನ್‌ಸ್ಟೇಬಲ್ ರವೀಂದ್ರ ಸ್ಥಳಕ್ಕೆ ತೆರಳಿ ಗಲಾಟೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡ ಆರೋಪಿಗಳು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಈ ಸಂದರ್ಭದಲ್ಲಿ ಮೊದಲ ಆರೋಪಿ ಮುಸ್ತಾಕ್ ನಿಮ್ಮಲ್ಲೊಬ್ಬರನ್ನು ಕೊಲೆ ಮಾಡಿದರೆ ಬುದ್ಧಿ ಬರುತ್ತದೆ ಎಂದು ತನ್ನ ಕೈಯಲ್ಲಿದ್ದ ಚಾಕುವಿನಿಂದ ರವೀಂದ್ರ ಅವರಿಗೆ ಇರಿದು ಹತ್ಯೆಗೆ ಯತ್ನಿಸಿದ್ದ. ಈ ವೇಳೆ ಉಮೇಶ್ ತಡೆದಿದ್ದರು. ಒಂದನೇ ಆರೋಪಿ ಮತ್ತು ಇತರರು ರವೀಂದ್ರ ಅವರ ಕೈಗಳನ್ನು ಹಿಡಿದು ಬಲವಾಗಿ ತಿರುಗಿಸಿದ್ದರು. ಮುಸ್ತಾಕ್ ಚೂರಿಯಿಂದ ರವೀಂದ್ರ ಅವರ ಎಡಕೈಗೆ ರಕ್ತಬರುವಂತೆ ತಿರುವಿದ್ದ. ಉಮೇಶ್ ಅವರಿಗೂ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ.