ಹಾಸನ: ಎರಡು ವರ್ಷಗಳ ಹಿಂದೆ ಗಂಗಾಧರ ಎಂಬ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದ ಸಂಬಂಧ 6 ಮಂದಿಗೆ ನ್ಯಾಯಾಧೀಶರು ತಲಾ 6 ವರ್ಷಗಳ ಕಾಲ ಶಿಕ್ಷೆ ವಿಧಿಸುವ ಮೂಲಕ ವಿಶೇಷ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಊಪಿನಹಳ್ಳಿ ಗ್ರಾಮದ ಗಂಗಾಧರ್ (42) ಕೊಲೆಯಾದ ವ್ಯಕ್ತಿ. ಚನ್ನರಾಯಪಟ್ಟಣ ತಾಲೂಕು ಜನಿವಾರ ಗ್ರಾಮದ ಭರತ್ (34), ಅಭಿಷೇಕ್ ಅಲಿಯಾಸ್ ಕಬಾಬ್ ಅಭಿ (29), ಚಿರಂಜೀವಿ (27), ಅಭಿ ಅಲಿಯಾಸ್ ರೆಬಲ್ ಅಭಿ (32), ಸೋಮಶೇಖರ್ ( 33), ಕುಮಾರ್ ಅಲಿಯಾಸ್ ಕಳ್ಳ ಕುಮಾರ್ ಶಿಕ್ಷೆಗೊಳಗಾದ ಆರೋಪಿಗಳು.
ಏನಿದು ಪ್ರಕರಣ?: ಮೃತ ವ್ಯಕ್ತಿ ಗಂಗಾಧರ್ ವೃತ್ತಿಯಲ್ಲಿ ಟೈಲರ್. ಕಳೆದ 20 ವರ್ಷಗಳಿಂದ ಪಟ್ಟಣದ ಕೆ.ಆರ್.ವೃತ್ತದ ಬಳಿ ಎಂ.ಜಿ. ಟೈಲರ್ ಎಂಬ ಅಂಗಡಿ ಇಟ್ಟುಕೊಂಡಿದ್ದರು. ಎರಡೂವರೆ ವರ್ಷಗಳ ಹಿಂದೆ ಮೃತ ಗಂಗಾಧರ್ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುವಾಗ, ತಮ್ಮ ಮೊಬೈಲ್ನಿಂದ ಗ್ರಾಹಕರೊಬ್ಬರಿಗೆ ಕರೆ ಮಾಡಲು ಹೋಗಿ ಒಂದು ನಂಬರ್ ತಪ್ಪಾಗಿ ಓರ್ವ ಮಹಿಳೆಗೆ ಡಯಲ್ ಆಗಿತ್ತು. ಆದರೆ, ಆ ಕರೆ ರಿಂಗ್ ಆದ ಬಳಿಕ ಕಟ್ ಮಾಡಿ, ಸರಿಯಾದ ನಂಬರ್ಗೆ ಫೋನ್ ಮಾಡಿ ಮಾತನಾಡಿದ್ದರು. ಕೆಲ ಸಮಯದ ಬಳಿಕ ಅದೇ ನಂಬರ್ನಿಂದ ಗಂಗಾಧರ್ಗೆ ಫೋನ್ ಬಂದಿತ್ತು. ಗಂಗಾಧರ್ "ಯಾರಿಗೋ ಕರೆ ಮಾಡಲು ಹೋಗಿ ಒಂದು ನಂಬರ್ ತಪ್ಪಾಗಿ ನಿಮಗೆ ಬಂತು" ಎಂದು ಕರೆ ಕಟ್ ಮಾಡಿದ್ದರು. ಆದರೆ ಆ ಮಹಿಳೆ ಮತ್ತೆ ಕರೆ ಮಾಡಿ "ನೀವು ಬೇಕು ಅಂತಲೆ ಕರೆ ಮಾಡಿದ್ದೀರಾ" ಎಂದು ಜೋರಾಗಿ ಮಾತಾನಾಡಲು ಪ್ರಾರಂಭಿಸಿದಾಗ, ಮೃತ ಗಂಗಾಧರ್ ಕೂಡ ಸ್ವಲ್ಪ ಜೋರಾಗಿ ಮಾತನಾಡಿದ್ದರು. ನಂತರ ಸಿಟ್ಟಿನಿಂದ ಆಕೆಗೆ ಬೈದು ಕರೆ ಕಟ್ ಮಾಡಿದ್ದರು. ಕೊನೆಗೆ ತನ್ನದಲ್ಲದ ತಪ್ಪಿಗೆ ಒಂದು ಮೆಸೇಜ್ ಮೂಲಕ ಕ್ಷಮೆಯನ್ನೂ ಕೇಳಿದ್ದರು.
ಭಯಗೊಳಿಸುವ ಭರದಲ್ಲಿ ಮನಸೋ ಇಚ್ಛೆ ಹಲ್ಲೆ:ಈ ವಿಚಾರವನ್ನು ಮಹಿಳೆ ತನ್ನ ಪತಿ ಭರತ್ಗೆ ಹೇಳಿದ್ದರು. ಸಿಟ್ಟಾದ ಭರತ್ ತನ್ನ ಸ್ನೇಹಿತರೊಂದಿಗೆ ಚನ್ನರಾಯಪಟ್ಟಣದ ಎಂ.ಜಿ. ಟೈಲರ್ ಶಾಪ್ಗೆ ಆಗಮಿಸಿ ಗಂಗಾಧರ್ ಅವರನ್ನು ಕಿಡ್ನಾಪ್ ಮಾಡಿದ್ದರು. ಶ್ರವಣಬೆಳಗೊಳ ರಸ್ತೆಯ ಜನಿವಾರ ಗ್ರಾಮದ ಬಳಿಯಿರುವ ರೈಲ್ವೆ ಟ್ರ್ಯಾಕ್ ಬಳಿಗೆ ಕರೆತಂದು ಭಯಗೊಳಿಸುವ ಭರದಲ್ಲಿ ಅವರಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು. ಈ ವೇಳೆ, ಆಕಸ್ಮಿಕವಾಗಿ ಗಂಗಾಧರ್ ಅಲ್ಲಿಯೇ ಕುಸಿದು ಬಿದ್ದಿದ್ದರು. ಸ್ಥಳಕ್ಕೆ ಬಂದ ಸ್ಥಳೀಯರನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದರು.