ವಿಜಯಪುರ:ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕನನ್ನು ಸತತ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಯ 20 ಗಂಟೆಗಳ ಸತತ ಕಾರ್ಯಾಚರಣೆಯಿಂದ ಬಾಲಕ ಸಾತ್ವಿಕ್ ಸಾವು ಗೆದ್ದು ಬಂದಿದ್ದಾನೆ. ರಕ್ಷಣೆ ಬಳಿಕ ಬಾಲಕನನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದೆ.
ಸತೀಶ ಮುಜಗೊಂಡ ಹಾಗೂ ಪೂಜಾ ಮುಜಗೊಂಡ ಎಂಬುವರ ಪುತ್ರ ಎರಡು ವರ್ಷ ವಯಸ್ಸಿನ ಸಾತ್ವಿಕ್ ಬುಧವಾರ ಸಂಜೆ ವೇಳೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಹೊಲದಲ್ಲಿನ ಕೊಳೆವೆ ಬಾಯಿಯಲ್ಲಿ ಬಿದ್ದಿದ್ದ.
ಸತತ 20 ಗಂಟೆಗಳಿಗೂ ಅಧಿಕ ಕಾಲ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ನಡೆದಿತ್ತು. ನಿನ್ನೆ ಸಂಜೆ 6 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮುಜಗೊಂಡ ದಂಪತಿಯು ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು, ಲಿಂಬೆ ಬೆಳೆಯಲು ಕೊಳವೆಬಾವಿ ಕೊರೆಸಿದ್ದರು. ಈ ಕೊಳವೆ ಬಾವಿಗೆ ಬಾಲಕ ಆಕಸ್ಮಿಕವಾಗಿ ಬಿದ್ದಿದ್ದ. ಬಾಲಕನ ಉಸಿರಾಟಕ್ಕಾಗಿ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಾಗಿತ್ತು. ಆತ ಸುಮಾರು 20 ಅಡಿ ಆಳದಲ್ಲಿ ಸಿಲುಕಿದ್ದ. ಹೈದರಾಬಾದ್ನಿಂದ ರಕ್ಷಣಾ ಕಾರ್ಯಾಚರಣೆ ಆಗಮಿಸಿತ್ತು. 20 ಗಂಟೆಗಳ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಯ 20 ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕನನ್ನ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಇನ್ನು ಕಾರ್ಯಾಚರಣೆಗೆ ಸಾರ್ವಜನಿಕರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾತ್ವಿಕ್ ಬದುಕಿ ಬರಲೆಂದು ಪೂಜೆ, ಪುನಸ್ಕಾರ ನಡೆಸಿದ್ದರು. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಯಲ್ಲಿಯೂ ಗ್ರಾಮದ ಯುವಕರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದರು.