ಬೆಂಗಳೂರು:ಬಳ್ಳಾರಿ, ಬೆಳಗಾವಿಯ ಬೆನ್ನಲ್ಲೇ ಬೆಂಗಳೂರಲ್ಲೂ ಬಾಣಂತಿ ಸಾವಿನ ಸರಣಿ ಮುಂದುವರೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟರೆ, ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಂದು ಸಾವು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಇಬ್ಬರು ಬಾಣಂತಿಯರ ಸಾವಾಗಿದೆ.
ಅಸ್ಸಾಂ ಮೂಲದ 32 ವರ್ಷದ ವಿನುತಿ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡೆಲಿವರಿಗೆ ಎಂದು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ, ನಿನ್ನೆ ರಾತ್ರಿಗೆ ಮಗುವಿಗೆ ಜನ್ಮ ನೀಡಿದ್ದಾರೆ. ಡೆಲಿವರಿ ಆದ ಬಳಿಕ ರಕ್ತಸ್ರಾವ ಹೆಚ್ಚಾಗಿದ್ದ ಕಾರಣಕ್ಕೆ ವಾಣಿ ವಿಲಾಸ್ ಆಸ್ಪತ್ರೆಗೆ ಶಿಫ್ಫ್ ಮಾಡಲಾಗಿತ್ತು. ಆದರೆ, ಕೆಲ ಗಂಟೆಗಳಲ್ಲಿಯೇ ಬಾಣಂತಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ವೈದ್ಯರು ಹೇಳಿದ್ದಿಷ್ಟು:ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿಯಾಗಿತ್ತು. ಡೆಲಿವರಿ ಬಳಿಕ ಹೆಚ್ಚು ರಕ್ತಸ್ತಾವ ಆಗಿತ್ತು. ಹೀಗಾಗಿ ನಮ್ಮ ಆಸ್ಪತ್ರೆಗೆ ಕಳುಹಿಸಿದ್ದರು. ಕೆ ಸಿ ಜನರಲ್ ಆಸ್ಪತ್ರೆಯಿಂದ ಬಂದಾಗ ಕಂಡಿಷನ್ ಕ್ರಿಟಿಕಲ್ ಆಗಿತ್ತು. ಹೆಚ್ಚು ರಕ್ತಸ್ರಾವ ಕೂಡಾ ಆಗುತ್ತಿತ್ತು. ಹೆಚ್ಚು ಬ್ಲಡ್ ಇನ್ಫ್ಯೂಸ್ ಮಾಡಿದೆವು. ಅತಿಯಾದ ರಕ್ತಸ್ರಾವದಿಂದ ಗರ್ಭಿಣಿಯ ಸಾವು ಆಗಿದೆ ಎಂದು ವಾಣಿ ವಿಲಾಸ್ ಆಸ್ಪತ್ರೆ ಡಾ ಶರಧಿನಿ ಅವರು ಹೇಳಿದ್ದಾರೆ.
ಎರಡನೇ ಪ್ರಕರಣ:ಇನ್ನು ನಗರ ನಿವಾಸಿ, ವೃತ್ತಿಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಾಣಂತಿ ಅನುಷಾ (28) ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅವರು ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದರು.
ಮೃತಳ ಸಂಬಂಧಿಕರ ಆರೋಪವೇನು?:ಮೂಲತಃ ಕಡೂರು ತಾಲೂಕಿನ ಗರ್ಜೆ ಗ್ರಾಮದವರಾದ ಅನುಷಾ ಅವರಿಗೆ ತರೀಕೆರೆ ರಾಜ್ ನರ್ಸಿಂಗ್ ಹೋಮ್‌ನಲ್ಲಿ ನಾರ್ಮಲ್ ಡೆಲಿವರಿ ಆಗಿತ್ತು. ಫ್ರಿ ಡೆಲಿವರಿ ಸ್ಕ್ಯಾನಿಂಗ್ ಮಾಡಿದಾಗ ಸ್ಟೋನ್ ಇದೆ ಎಂದು ವೈದ್ಯರು ಹೇಳಿದ್ದರು. ಅದೇ ಸ್ಕ್ಯಾನಿಂಗ್ ರಿಪೋರ್ಟ್ ಆಧಾರದ ಮೇಲೆ ಶಿವಮೊಗ್ಗದ ಖಾಸಗಿ (ಮ್ಯಾಕ್ಸ್) ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿತ್ತು. ಆಪರೇಷನ್ ವೇಳೆ ಕರುಳಿಗೆ ಡ್ಯಾಮೇಜ್ ಆಗಿತ್ತು. ಈ ವಿಚಾರವನ್ನು ವೈದ್ಯರು ಮುಚ್ಚಿಟ್ಟಿದ್ದರು. ನಂತರ ನಗರದ ಪೋರ್ಟಿಸ್ ಆಸ್ಪತ್ರೆಯಲ್ಲಿ ಕಳೆದ ದಿನಗಳ ಚಿಕಿತ್ಸೆಗೆ ನಾಲ್ಕುವರೆ ಲಕ್ಷ ಬಿಲ್ ಮಾಡಿದ್ದಾರೆ. ಪ್ರಕರಣ ಚರ್ಚೆಗೆ ಬಂದ ಬಳಿಕ ಎರಡೂವರೆ ಲಕ್ಷ ಕೇಳುತ್ತಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.