ಬೆಂಗಳೂರು: ರಾತ್ರಿ ವೇಳೆ ಪ್ರಯಾಣಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆಟೋ ಚಾಲಕ ಸೇರಿ ಇಬ್ಬರನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕ ಶಿವಕುಮಾರ್ ಹಾಗೂ ಮಂಟೇಪ್ಪ ಬಂಧಿತರು. ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ದೂರುದಾರ ರಾಮಕೃಷ್ಣ ಎಂಬುವವರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.
"ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಶಿವಕುಮಾರ್ ನಂದಿನಿ ಲೇಔಟ್ ನಿವಾಸಿಯಾಗಿದ್ದು, ವ್ಯಕ್ತಿಯೊಬ್ಬರಿಂದ ಆಟೋ ಬಾಡಿಗೆ ಪಡೆದು ಜೀವನ ನಡೆಸುತ್ತಿದ್ದ. ಹೆಚ್ಚಿನ ಹಣ ಸಂಪಾದನೆ ಮಾಡಲು ವಾಮಮಾರ್ಗ ತುಳಿದ ಚಾಲಕನಿಗೆ ಸಹಚರ ಮಂಟೇಪ್ಪ ಸಾಥ್ ನೀಡಿದ್ದ. ಸೆ.19ರಂದು ದೂರುದಾರ ರಾಮಕೃಷ್ಣ ಅವರು ಹೊರ ಜಿಲ್ಲೆಯಲ್ಲಿ ಕೇಸೊಂದನ್ನು ಮುಗಿಸಿ ವಾಪಸ್ ನಗರಕ್ಕೆ ಬಂದು ನವರಂಗ್ ಚಿತ್ರಮಂದಿರ ಬಳಿ ಆರೋಪಿಯ ಆಟೋ ಹತ್ತಿದ್ದರು" ಎಂದು ಪೊಲೀಸರು ತಿಳಿಸಿದರು.
"ಮಾರ್ಗಮಧ್ಯೆ ಮತ್ತೊಬ್ಬ ಆರೋಪಿ ಮಂಟೇಪ್ಪ ಆಟೋ ಹತ್ತಿದ್ದ. ಇದನ್ನು ಪ್ರಶ್ನಿಸಿದಾಗ ಏಕಾಏಕಿ ಚಾಕು ತೆಗೆದು ವಕೀಲನ ಕುತ್ತಿಗೆಗೆ ಇಟ್ಟಿದ್ದ. ಮಧ್ಯರಾತ್ರಿ ಆದ ಕಾರಣ ಯಾರು ಇರದ ರಸ್ತೆಗಳಲ್ಲಿ ಆಟೋವನ್ನು ಸುತ್ತಾಡಿಸಿ ಸುಲಿಗೆಗೆ ಮುಂದಾಗಿದ್ದಾರೆ. ಕೊನೆಗೆ ಕ್ಯೂಟೀಸ್ ಆಸ್ಪತ್ರೆ ಬಳಿ ಬಂದು ವಕೀಲರ ಬಳಿ ಇದ್ದ 900 ರೂಪಾಯಿ ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿ ಪೊಲೀಸರಿಗೆ ಹೇಳಿದರೆ ಜೈಲಿಗೆ ಹೋಗಿ ವಾಪಸ್ ಬಂದು ಕೊಲೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿದ್ದರು" ಎಂದು ಹೇಳಿದರು.