ಬೆಂಗಳೂರು: ನಗರದ ನಾಗರಿಕರೇ, ಸೈಟು ಖರೀದಿಸುವ ಮುನ್ನ ಎಚ್ಚರ!. ಸಮಗ್ರವಾಗಿ ದಾಖಲಾತಿ ಪರಿಶೀಲಿಸದೇ ನಿವೇಶನ ಖರೀದಿಸಿದರೆ ವಂಚನೆಗೊಳಗಾಗುವುದು ಗ್ಯಾರಂಟಿ. ನಕಲಿ ದಾಖಲಾತಿ ಸೃಷ್ಟಿಸಿ ಸಾರ್ವಜನಿಕರ ಹೆಸರಿನಲ್ಲಿ ಫೈನಾನ್ಸ್ಗಳಲ್ಲಿ ಲೋನ್ ಮಾಡಿಸಿ, ವಂಚಿಸುತ್ತಿದ್ದ ಇಬ್ಬರನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ವಂಚನೆಗೊಳಗಾದ ಶೈಲಾಶ್ರೀ ಎಂಬವರು ನೀಡಿದ ದೂರಿನ ಮೇರೆಗೆ ನಂದಿನಿ (42) ಹಾಗೂ ಮಂಜುನಾಥ್ (35) ಎಂಬವರನ್ನು ಬಂಧಿಸಲಾಗಿದೆ. ವಂಚನೆ ಕೃತ್ಯದಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯಿದ್ದು, ನೊಟೀಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ನಂದಿನಿ ಮೈಸೂರು ಮೂಲದವರು. ಕೆಲ ವರ್ಷಗಳ ಹಿಂದೆ ಈಕೆಯ ಪತಿ ನಿಧನರಾಗಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ ಈಕೆ, ನಿವೇಶನ ಮಾರಾಟಕ್ಕಿರುವುದಾಗಿ ನಂಬಿಸಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದರು. ವ್ಯವಸ್ಥಿತವಾಗಿ ತಂಡ ಕಟ್ಟಿಕೊಂಡು ನಿವೇಶನಗಳಿಗೆ ನಕಲಿ ದಾಖಲಾತಿ ಸೃಷ್ಟಿಸುತ್ತಿದ್ದರು. ದೂರುದಾರ ಮಹಿಳೆಯನ್ನು ಸಂಪರ್ಕಿಸಿ ವಿವಾದಿತ ನಿವೇಶನ ತೋರಿಸಿದ್ದಲ್ಲದೇ ಹಲವು ಫೈನಾನ್ಸ್ ಹಾಗೂ ಬ್ಯಾಂಕ್ಗಳಲ್ಲಿ ಲೋನ್ ಮಾಡಿಸಿ ಕೊಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ಮಹಿಳೆ ಎಲ್ಲಾ ದಾಖಲಾತಿಗಳನ್ನು ಆರೋಪಿತೆಯ ತಂಡಕ್ಕೆ ನೀಡಿದ್ದರು.