ಬೆಂಗಳೂರು: ಷೇರು ಪೇಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಗ್ರಾಹಕರಿಗೆ ಕರೆ ಮಾಡುತ್ತಿದ್ದ ಕಾಲ್ ಸೆಂಟರ್ ಮೇಲೆ ಹುಳಿಮಾವು ಪೊಲೀಸರು ಶುಕ್ರವಾರ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ಇದೇ ವೇಳೆ 15 ಜನರನ್ನು ವಶಕ್ಕೆ ಪಡೆದಿದ್ದಾರೆ.
ಠಾಣಾ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ತೆರೆಯಲಾಗಿದ್ದ ಕಾಲ್ ಸೆಂಟರ್ ಅಧಿಕೃತವಾಗಿ ನೋಂದಣಿ ಆಗಿಲ್ಲ. ಏಳು ಮಂದಿ ಯುವತಿಯರು ಹಾಗೂ ಎಂಟು ಜನ ಯುವಕರು ಇಲ್ಲಿ ಕೆಲಸ ಮಾಡುತ್ತಿದ್ದು, ಗ್ರಾಹಕರಿಗೆ ಕರೆ ಮಾಡಿ ಷೇರು ಪೇಟೆಯಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ.
ಸಾರ್ವಜನಿಕರ ದೂರಿನ ಮೇರೆಗೆ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ, ಮಾಲೀಕ ಜಿತೇಂದ್ರ ಕುಮಾರ್ ಮತ್ತು ಪಾಲುದಾರ ಚಂದನ್ ಕುಮಾರ್ ಅವರನ್ನು ಬಂಧಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
15 ನೌಕರರ ವಿಚಾರಣೆ ನಡೆಯುತ್ತಿದೆ. ಈವರೆಗೆ ಎಷ್ಟು ಗ್ರಾಹಕರಿಗೆ ಕರೆ ಮಾಡಲಾಗಿದೆ ಹಾಗೂ ಯಾವ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವಂತೆ ಗ್ರಾಹಕರಿಗೆ ಕರೆ ಮಾಡಿ ಒತ್ತಡ ಹೇರುತ್ತಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಾಲ್ ಮಾಡಿ ಒಟಿಪಿ ಕೇಳ್ತಾರೆ, ನಿಮ್ಮ ದುಡ್ಡು ಹೊಡಿತಾರೆ: ಬಾಣಂತಿಯರೇ ಎಚ್ಚರ, ಎಚ್ಚರ! - Cyber Case - CYBER CASE