ಮೈಸೂರು: ಕೇರಳ ಉದ್ಯಮಿ ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಕಾರು ಹಾಗೂ ಡರೋಡೆಕೋರರ ಕಾರು ಪತ್ತೆಯಾಗಿದೆ. ದರೋಡೆ ಪ್ರಕರಣ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ಮೂರು ತಂಡ ರಚಿಸಿ ತನಿಖೆಗಿಳಿದಿದ್ದಾರೆ.
ಹೆಚ್.ಡಿ.ಕೋಟೆ ರಸ್ತೆಯ ಹಾರೋಹಳ್ಳಿ ಬಳಿ ಸೋಮವಾರ ಬೆಳಗ್ಗೆ 9.15 ಗಂಟೆ ವೇಳೆ ಕೇರಳ ಮೂಲದ ಉದ್ಯಮಿ ಅಶ್ರಫ್ ಅಹಮ್ಮದ್ ಹಾಗೂ ಆತನ ಚಾಲಕ ಸೂಫಿ ಎಂಬುವವರು ಚಲುಸುತ್ತಿದ್ದ ಕಾರನ್ನು, ಎರಡು ಕಾರುಗಳಲ್ಲಿ ಬಂದ ದರೋಡೆಕೋರರು ಅಡ್ಡಗಟ್ಟಿ ಕಾರಿನಿಂದ ಅವರನ್ನು ಕೆಳಗಿಳಿಸಿ, ಹಲ್ಲೆ ಮಾಡಿ ಹಣದ ಸಮೇತ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಸುಮಾರು 12 ಕಿ.ಮೀ. ದೂರದ ರಸ್ತೆಯಲ್ಲಿ ಉದ್ಯಮಿ ಕಾರನ್ನು ಬಿಟ್ಟು, ಅದರಲ್ಲಿದ್ದ 1.5 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಉದ್ಯಮ ಕಾರು ಮಾಂಬಳ್ಳಿಯಲ್ಲಿರುವುದನ್ನು ಪೊಲೀಸರು ಪತ್ತೆ ಮಾಡಿದ್ದು, ದರೋಡೆಕೋರರು ಬಳಸಿದ್ದ ಎರಡು ಕಾರುಗಳ ಪೈಕಿ ಒಂದು ಕಾರನ್ನು 6 ಕಿ.ಮೀ ದೂರದ ಗೋಪಾಲ್ ಪುರ ಎಂಬಲ್ಲಿ ಬಿಟ್ಟು ಹೋಗಿದ್ದಾರೆ. ಈ ಎರಡು ಕಾರುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಫ್ಐಆರ್ನಲ್ಲಿ ಏನಿದೆ: ಕಳೆದ 9 ವರ್ಷಗಳಿಂದ ಚಾಕೊಲೇಟ್ ವ್ಯಾಪಾರ ಮಾಡುತ್ತಿರುವ ಅಶ್ರಫ್, ಅಡಕೆ ಖರೀದಿಸಲೆಂದು ಹೆಚ್.ಡಿ.ಕೋಟೆಗೆ ಫೋರ್ಡ್ ಎಕೋ ಸ್ಪೋರ್ಟ್ ಕಾರಿನಲ್ಲಿ ಹೋಗುತ್ತಿದ್ದಾಗ, ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿ ಬಂದ ಐವರು ಮುಸುಕುಧಾರಿಗಳು, ಬೆಳಗ್ಗೆ ಸುಮಾರು 9.15 ಗಂಟೆ ವೇಳೆ ಸಿನಿಮೀಯ ಶೈಲಿಯಲ್ಲಿ ಕಾರು ಅಡ್ಡಗಟ್ಟಿದ್ದಾರೆ.
ಇದನ್ನೂ ಓದಿ: ಮೈಸೂರು: ಹಾಡಹಗಲೇ ಕಾರು ಕದ್ದೊಯ್ದ ದರೋಡೆಕೋರರು; ತನಿಖೆಗೆ 3 ಪೊಲೀಸ್ ತಂಡ ರಚನೆ
ನಂತರ ಐದಾರು ಜನರು ಕಾರನ್ನು ಸುತ್ತುವರೆದು ಜಾಕ್, ರಾಡ್ನಿಂದ ಕಾರಿನ ಸೈಡ್ ಗಾಜುಗಳನ್ನು ಒಡೆದು ಹಾಕಿ, ಅಶ್ರಫ್ ಮತ್ತು ಆತನ ಕಾರು ಚಾಲಕ ಸೂಫಿ ಅವರನ್ನು ಕಾರಿನಿಂದ ಕೆಳಗಿಳಿಸಿ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿರೋಧ ಒಡ್ಡಿದ ಅಶ್ರಫ್ ಮತ್ತು ಸೂಫಿ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಕಾರಿನಲ್ಲಿದ್ದ 1.5 ಲಕ್ಷ ರೂ. ನಗದು ದೋಚಿ ಕಾರಿನೊಂದಿಗೆ ಹೆಚ್.ಡಿ ಕೋಟೆಯ ಕಡೆಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎಸ್ಪಿ ಹೇಳಿದ್ದೇನು?: "ಡರೋಡೆ ಪ್ರಕರಣದ ಸಂಬಂಧ ನಿನ್ನೆಯೇ ಮೂರು ತಂಡ ರಚಿಸಿದ್ದು, ದೂರುದಾರರಿಂದ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಈಗಾಗಲೇ ಸ್ಥಳ ಮಹಜರು ನಡೆಸಿದ್ದೇವೆ. ಮೂರು ತಂಡಗಳು ಈಗಾಗಲೇ ತನಿಖೆ ಕೈಗೊಂಡಿದ್ದು, ಒಂದೆರಡು ದಿನಗಳಲ್ಲಿ ಪ್ರಕರಣವನ್ನು ಭೇದಿಸುತ್ತೇವೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ 'ಈಟಿವಿ ಭಾರತ್'ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ : ತಮಿಳುನಾಡಿನಲ್ಲಿ ಮೂವರು ಅರೆಸ್ಟ್