ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಈ ಮಾರ್ಗದಲ್ಲಿ ಚಾಲಕರಹಿತ ರೈಲುಗಳ ಸಂಚಾರ ನಡೆಯುತ್ತದೆ. ಆದರೆ ವಾಣಿಜ್ಯ ಸಂಚಾರ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
2017ರಲ್ಲಿ ಈ ಮಾರ್ಗದ ಕಾಮಗಾರಿ ಆರಂಭವಾಗಿದ್ದು, ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಈ ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ರೈಲು ಓಡಿಸಲು ಮೆಟ್ರೋ ಮುಂದಾಗಿದೆ. ಈಗಾಗಲೇ ಈ ಮಾದರಿಯ ಎರಡು ರೈಲುಗಳು ಚೀನಾದಿಂದ ಬಂದಿದ್ದು, ಸದ್ಯ ಪ್ರಾಯೋಗಿಕ ಸಂಚಾರ ಚಾಲಕ ಸಹಿತವಾಗಿಯೇ ನಡೆಯುತ್ತಿದೆ.
18.82 ಕಿ.ಮೀ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭವಾದರೆ ನಗರದ ಸಂಚಾರ ದಟ್ಟಣೆ ಸ್ವಲ್ಪ ಕಡಿಮೆಯಾಗಲಿದೆ. 30ಕ್ಕೂ ಅಧಿಕ ಮಾದರಿ ಪ್ರಾಯೋಗಿಕ ಪರೀಕ್ಷೆಗಳು ಮುಗಿದ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗವನ್ನು ಪರಿಶೀಲಿಸಲಿದ್ದಾರೆ. ಬಳಿಕ ವಾಣಿಜ್ಯ ಸಂಚಾರಕ್ಕೆ ಹಸಿರು ನಿಶಾನೆ ಸಿಗಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.
ಈ ಮಾರ್ಗದಲ್ಲಿ ಸದ್ಯ ಎರಡು ರೈಲುಗಳಲ್ಲಿ ಪ್ರಾಯೋಗಿಕ ಸಂಚಾರ ನಡೆಸುತ್ತಿವೆ. ಪೂರ್ಣ ಪ್ರಮಾಣದ ಪರೀಕ್ಷೆಗೆ ಇನ್ನೂ ಎರಡು ರೈಲುಗಳ ಅಗತ್ಯವಿದೆ. ಚಾಲಕ ರಹಿತ ನಮ್ಮ ಮೆಟ್ರೋ ರೈಲು ಬೋಗಿಗಳು ಇನ್ನೂ ನಿರ್ಮಾಣ ಹಂತದಲ್ಲಿದೆ. ಆದ್ದರಿಂದ ಪ್ರಾಯೋಗಿಕ ಸಂಚಾರ ಮುಗಿಸಿದ ಬಳಿಕ ವಾಣಿಜ್ಯ ಸಂಚಾರ ಆರಂಭಮಾಡಲು ರೈಲುಗಳ ಕೊರತೆ ಎದುರಾಗುತ್ತಿದೆ. ಇನ್ನೂ 3-4 ತಿಂಗಳಲ್ಲಿ ಬೋಗಿಗಳು ಬರುವ ನಿರೀಕ್ಷೆ ಇದೆ ಎಂದಿದ್ದಾರೆ.
ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ 36 ಬೋಗಿಯ 6 ರೈಲುಗಳ ಅಗತ್ಯವಿದೆ. ಸದ್ಯ ಎರಡು ರೈಲುಗಳಿವೆ. ಇನ್ನೂ ಎರಡು ರೈಲುಗಳು 2 ತಿಂಗಳಿನಲ್ಲಿ ಬರಬಹುದು. ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ಗೆ ಬೋಗಿ ತಯಾರಿಕಾ ಟೆಂಡರ್ ನೀಡಲಾಗಿದೆ. ಒಪ್ಪಂದದ ಅನ್ವಯ ಭಾರತದ ತನ್ನ ಪಾಲುದಾರ ಕೋಲ್ಕತ್ತಾ ಮೂಲದ ಟಿಟಾಗರ್ ವ್ಯಾಗನ್ಸ್ ಮೂಲಕ 216 ಬೋಗಿಯನ್ನು ತಯಾರಿಸಿ ಪೂರೈಕೆ ಮಾಡಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಹಳದಿ ಮಾರ್ಗದ ನಿಲ್ದಾಣಗಳು:ಹಳದಿ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹಸ್ಕೂರ್ ರಸ್ತೆ, ಇನ್ಫೋಸಿಸ್ ಫೌಂಡೇಶನ್, ಎಲೆಕ್ಟ್ರಾನಿಕ್ ಸಿಟಿ, ಬಿರಿಟೆನ ಅಗ್ರಹಾರ, ಹೊಸರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ.ರಸ್ತೆ ನಿಲ್ದಾಣಗಳಿವೆ.
ಇದನ್ನೂ ಓದಿ:ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ - DEVEGOWDA TRAVELED IN DELHI METRO