ಬೆಂಗಳೂರು: ಬೆಂಗಳೂರಲ್ಲಿ ಆಟೋ ರಿಕ್ಷಾ ಪರ್ಮಿಟ್ ಸಂಖ್ಯೆಯನ್ನು ಹೆಚ್ಚಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು, ಬೆಂಗಳೂರಲ್ಲಿ 1 ಲಕ್ಷ ಆಟೋ ರಿಕ್ಷಾಗಳಿಗೆ ಹೊಸ ಪರವಾನಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ.
ಇನ್ನು ಮುಂದೆ ಬೆಂಗಳೂರು ರಸ್ತೆಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಟೋ ರಿಕ್ಷಾಗಳು ಓಡಾಡಲಿವೆ. ಈಗಾಗಲೇ ಸಂಚಾರ ದಟ್ಟಣೆಯಿಂದ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರಲ್ಲಿ ಇನ್ನಷ್ಟು ಹೆಚ್ಚು ಆಟೋ ರಿಕ್ಷಾಗಳು ರಸ್ತೆಗಳಿಯಲಿವೆ. ಕಾರಣ ಸಾರಿಗೆ ಇಲಾಖೆ ಬೆಂಗಳೂರಲ್ಲಿ ಈಗಿರುವ 1,55,000 ಆಟೋ ರಿಕ್ಷಾ ಪರ್ಮಿಟ್ ಮಿತಿಯನ್ನು 2,55,000 ಗೆ ಏರಿಸುವ ಸಂಬಂಧ ಅಧಿಸೂಚನೆ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಹೊಸ ಆಟೋ ರಿಕ್ಷಾ ಪರ್ಮಿಟ್ ನೀಡಲು ತೀರ್ಮಾನಿಸಲಾಗಿದೆ.
ಈ ಮುಂಚೆ 2018ರಲ್ಲಿ ಆಟೋ ರಿಕ್ಷಾ ಪರ್ಮಿಟ್ ನೀಡಲು ಸಾರಿಗೆ ಇಲಾಖೆ ಅನುಮತಿ ನೀಡಿತ್ತು. 5 ವರ್ಷದ ಅವಧಿಗೆ 1,25,000 ಲಕ್ಷ ಆಟೋ ರಿಕ್ಷಾ ಪರ್ಮಿಟ್ ಸಂಖ್ಯೆಯನ್ನು 1,55,000ಕ್ಕೆ ಏರಿಕೆ ಮಾಡಲಾಗಿತ್ತು. ಆ ಮೂಲಕ 30,000 ಹೊಸ ಆಟೋ ರಿಕ್ಷಾ ಪರ್ಮಿಟ್ ನೀಡಲು ತೀರ್ಮಾನಿಸಲಾಗಿತ್ತು. ಅದಕ್ಕೂ ಮುಂಚೆ 2011ರಲ್ಲಿ ಬೆಂಗಳೂರಲ್ಲಿ ಹೊಸ ಆಟೋ ಪರ್ನಿಟ್ ನೀಡಲಾಗಿತ್ತು. ಇದೀಗ 1 ಲಕ್ಷ ಹೊಸ ಪರ್ಮಿಟ್ ಕೊಡಲು ತೀರ್ಮಾನಿಸಲಾಗಿದೆ.
ಬೆಂಗಳೂರು ನಗರದಲ್ಲಿ ಜನದಟ್ಟಣೆ ಗರಿಷ್ಟ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆ ಹೊಸ ಆಟೋ ಪರ್ಮಿಟ್ಗಳಿಗಾಗಿನ ಬೇಡಿಕೆ ಹೆಚ್ಚಾಗುತ್ತಿದೆ. ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಜೊತೆಗೆ ನಗರದಲ್ಲಿನ ವಾಯು ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಎಲ್‌ಪಿಜಿ/ಸಿಎನ್ಜಿ ಆಟೋ ರಿಕ್ಷಾಗಳನ್ನು ರಸ್ತೆಗಿಳಿಸುವುದು ಮುಖ್ಯವಾಗಿದೆ ಎಂದು ಸಾರಿಗೆ ಇಲಾಖೆ ತನ್ನ ಆದೇಶದಲ್ಲಿ ವಿವರಿಸಿದೆ.
ಆಟೋ ರಿಕ್ಷಾಗಳ ಪರ್ಮಿಟ್ಗಾಗಿ ಅನಗತ್ಯ ಸ್ಪರ್ಧೆ ಉಂಟಾಗುವುದರ ಜೊತೆಗೆ ಆಟೋ ರಿಕ್ಷಾ ಪರ್ಮಿಟ್ಗಳ ಕಾಳಸಂತೆಯನ್ನು ನಿಯಂತ್ರಿಸುವ ಸಲುವಾಗಿ ಆಟೋ ರಿಕ್ಷಾ ಪರ್ಮಿಟ್ ಮಿತಿಯನ್ನು ಹೆಚ್ಚಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಕೂಲಂಕಷ ಪರಿಶೀಲನೆ ಬಳಿಕ ಆಟೋ ರಿಕ್ಷಾ ಪರ್ಮಿಟ್ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಪರ್ಮಿಟ್ ಪಡೆಯಲು ಷರತ್ತು ಏನು?:
- ಎಲ್‌ಪಿಜಿ/ ಸಿಎನ್ಜಿ/ ಎಲೆಕ್ಟ್ರಿಕ್ ಕಿಟ್ ಹಾಗೂ ಡಿಜಿಟಲ್ ದರ ಮೀಟರ್ ನೊಂದಿಗೆ ಬಿಎಸ್ VI ನಾಲ್ಕು ಸ್ಟ್ರೋಕ್ ಇಂಜಿನ್ನ ಹಸಿರು ಆಟೋ ರಿಕ್ಷಾಗಳಿಗೆ ಪರ್ಮಿಟ್ ನೀಡಲಾಗುತ್ತದೆ.
- ಈಗಾಗಲೇ ಆಟೋ ರಿಕ್ಷಾ ಪರ್ಮಿಟ್ ಹೊಂದಿದ ವ್ಯಕ್ತಿಗೆ ಹೊಸ ಪರ್ಮಿಟ್ ನೀಡಲಾಗುವುದಿಲ್ಲ.
- ಪರ್ಮಿಟ್ ಕೋರಿ ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಅಥವಾ ರೇಷನ್ ಕಾರ್ಡ್ ಅಥವಾ ಪಾನ್ ಕಾರ್ಡ್ ಸಲ್ಲಿಕೆ ಮಾಡಬೇಕು.
- ಪರ್ಮಿಟ್ ಕೋರಿ ಅರ್ಜಿ ಹಾಕುವ ವ್ಯಕ್ತಿ ಎಲ್‌ಪಿಜಿ/ಸಿಎನ್ಜಿ/ವಿದ್ಯುತ್ ಚಾಲಿತ ಆಟೋ ರಿಕ್ಷಾ ಓಡಿಸುವ ಡಿಎಲ್ ಹೊಂದಿರಬೇಕು.
ಮತ್ತಷ್ಟು ವಾಹನ ದಟ್ಟಣೆಗೆ ಕಾರಣವಾಗುತ್ತಾ?:
- 1 ಲಕ್ಷ ಹೊಸ ಆಟೋ ರಿಕ್ಷಾ ಪರ್ಮಿಟ್ ನೀಡುವ ಮೂಲಕ ಬೆಂಗಳೂರಲ್ಲಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ. ಈಗಾಗಲೇ ಬೆಂಗಳೂರು ನಗರ ವಾಹನ ದಟ್ಟಣೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ಬೇಕಾಬಿಟ್ಟಿ ಓಡಾಟ ನಡೆಸುವ ಆಟೋ ರಿಕ್ಷಾಗಳ ಪರ್ಮಿಟ್ ಸಂಖ್ಯೆಯನ್ನು ಹೆಚ್ಚಿಸಿದರೆ ನಗರದ ಟ್ರಾಫಿಕ್ ಬವಣೆ ಮತ್ತಷ್ಟು ಹದಗೆಡಲಿದೆ ಎಂದು ಟ್ರಾಫಿಕ್ ತಜ್ಞರೊಬ್ಬರು ತಿಳಿಸಿದ್ದಾರೆ.
- ಬೆಂಗಳೂರಲ್ಲಿ ಈಗಾಗಲೇ ಸುಮಾರು 2 ಲಕ್ಷಕ್ಕೂ ಅಧಿಕ ಆಟೋ ರಿಕ್ಷಾಗಳು ಓಡಾಡುತ್ತಿವೆ. ಈ ಪೈಕಿ ಕೇವಲ 1.25 ಲಕ್ಷ ಆಟೋಗಳಿಗೆ ಮಾತ್ರ ಪರವಾನಿಗೆ ಇದೆ. ಉಳಿದಂತೆ ಅನಧಿಕೃತ ಆಟೋ ರಿಕ್ಷಾಗಳಾಗಿವೆ. ಇದೀಗ ಹೊಸ ಆಟೋ ರಿಕ್ಷಾ ಪರ್ಮಿಟ್ ಅನ್ನು 1 ಲಕ್ಷದಷ್ಟು ಹೆಚ್ಚಿಸುವ ಮೂಲಕ ಆಟೋಗಳ ಸಂಖ್ಯೆ ಬೆಂಗಳೂರಲ್ಲಿ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ.
- ಕಾಳ ಸಂತೆಯಲ್ಲಿ ಬಿಕರಿಯಾಗುವ ಆಟೋ ರಿಕ್ಷಾ ಪರ್ಮಿಟ್ ವ್ಯವಹಾರಕ್ಕೆ ಈ ಹೊಸ ಪರ್ಮಿಟ್ ಬ್ರೇಕ್ ಹಾಕಲಿದೆ. ಜೊತೆಗೆ ಅನಧಿಕೃತ ಆಟೋ ಹೊಂದಿರುವ ಮಾಲೀಕರಿಗೆ ಪರ್ಮಿಟ್ ಪಡೆಯಲು ಅವಕಾಶ ಸಿಗಲಿದೆ. ಇದರಿಂದ ಅನಧಿಕೃತ ಆಟೋಗಳ ಪ್ರಮಾಣ ಕಡಿಮೆಯಾಗಲಿದೆ ಎಂಬ ಅಭಿಪ್ರಾಯವೂ ಇದೆ.
ಇದನ್ನೂ ಓದಿ:ಝೀರೋ ಟ್ರಾಫಿಕ್ ಎಂದೂ ಬಯಸಿದವನಲ್ಲ, ಟ್ರಾಫಿಕ್ ಪೊಲೀಸರು ದಾರಿ ಮಾಡಿಕೊಡುತ್ತಾರೆ ಅಷ್ಟೇ: ಸಿಎಂ ಸಿದ್ದರಾಮಯ್ಯ - CM Siddaramaiah