ಬೆಂಗಳೂರು: ನೀವೇನಾದರೂ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಬೇಕಾ? ಹಾಗಾದರೆ ಎರಡು ಗಂಟೆ ಮುನ್ನವೇ ಮನೆ ಬಿಡಿ. ಇಲ್ಲದಿದ್ದರೆ ಸಂಚಾರ ದಟ್ಟಣೆಯಾದೀತು..! ಈ ಮಾತನ್ನ ನಾವು ಹೇಳುತ್ತಿಲ್ಲ, ಬದಲಾಗಿ ನಗರದ ಸಂಚಾರ ಪೊಲೀಸರು ರಾಜಧಾನಿಯ ಸವಾರರಿಗೆ ಹೇಳುತ್ತಿರುವ ಕಿವಿಮಾತಿದು.
ಹೌದು, ಬೆಂಗಳೂರು-ಬಳ್ಳಾರಿ ರಸ್ತೆಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹೆಬ್ಬಾಳ ಮೇಲುಸೇತುವೆ ಬಳಿ ಬಿಡಿಎ ಹಾಗೂ ಬಿಎಂಆರ್ಸಿಎಲ್ ಸಂಸ್ಥೆಗಳು ವಿವಿಧ ಕಾಮಗಾರಿ ನಡೆಸುತ್ತಿರುವುದರಿಂದ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಅದರಲ್ಲೂ ಪೀಕ್ ಅವರ್ನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಹೀಗಾಗಿ ಏರ್ ಪೋರ್ಟ್ಗೆ ನಿಗದಿತ ವೇಳೆಗೆ ತಲುಪಬೇಕಾದರೆ ಎರಡು ಗಂಟೆ ಮುನ್ನವೇ ಪ್ರಯಾಣಿಸಿ ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ವಿಮಾಣ ನಿಲ್ದಾಣ, ಹೊರರಾಜ್ಯ ಹಾಗೂ ಜಿಲ್ಲೆಗಳಿಗೆ ಸಂಪರ್ಕಿಸುವ ಹೆಬ್ಬಾಳ ಮೇಲುಸೇತುವೆಯಲ್ಲಿ ಪ್ರತಿದಿನ ಸುಮಾರು 2.50 ಲಕ್ಷ ವಾಹನಗಳು ಸಂಚರಿಸುತ್ತವೆ. ಪ್ಲೈ ಓವರ್ ಮೇಲೆ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿವೆ. ಹೀಗಾಗಿ ಸಂಚಾರ ದಟ್ಟಣೆ ನಿಯಂತ್ರಿಸಲು ಬಿಡಿಎ ಹಾಗೂ ಬಿಎಂಆರ್ಸಿಎಲ್ ವಿವಿಧ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಪರ್ಯಾಯ ಮಾರ್ಗ ಬಳಸುವಂತೆ ಟ್ರಾಫಿಕ್ ಪೊಲೀಸರು ಕೋರಿದ್ದಾರೆ.
ಕೆ. ಆರ್ ಪುರ ಮಾರ್ಗದಿಂದ ನಗರಕ್ಕೆ ತಲುಪಲು ಹೆಬ್ಬಾಳ ಮೇಲುಸೇತುವೆ ಅಗಲೀಕರಣ ಕಾಮಗಾರಿಯನ್ನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕಾಮಗಾರಿ ನಡೆಸಲಾಗುತ್ತಿದೆ. ಸುಮಾರು 200 ಮೀಟರ್ವರೆಗೆ ಅಗಲೀಕರಣ ಕಾರ್ಯವಾಗಲಿದೆ. ಅದೇ ರೀತಿ ಹೆಬ್ಬಾಳ ಪೊಲೀಸ್ ಠಾಣೆ ಜಂಕ್ಷನ್ನಿಂದ ನಗರದ ಕಡೆಗೆ ಹೆಚ್ಚುವರಿ ಮೇಲುಸೇತುವೆ ನಿರ್ಮಾಣ ಭರದಿಂದ ಸಾಗಿದ್ದು, ಬಿಡಿಎ ನಿರ್ವಹಣೆ ಮಾಡುತ್ತಿದೆ.