ಬೆಂಗಳೂರು: ಷೇರು ಟ್ರೇಡಿಂಗ್ನಲ್ಲಿ ಹಣ ಹೂಡಿದರೆ ದುಪ್ಪಟ್ಟು ಹಣ ಹಿಂತಿರುಗಿಸುವುದಾಗಿ ಆಮಿಷವೊಡ್ಡಿ 1.5 ಕೋಟಿ ರೂ.ವಂಚಿಸಿದ್ದ ಪ್ರಕರಣದಲ್ಲಿ ನಾಲ್ವರು ಬ್ಯಾಂಕ್ ನೌಕರರು ಸೇರಿ ಒಟ್ಟು ಎಂಟು ಮಂದಿಯನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ.
ಯಲಹಂಕ ಮೂಲದ ವ್ಯಕ್ತಿಗೆ ಷೇರು ಟ್ರೇಡಿಂಗ್ನಲ್ಲಿ ಹಣ ಹೂಡಿದರೆ ಹಣ ದ್ವಿಗುಣ ಮಾಡುವುದಾಗಿ ಆಮಿಷವೊಡ್ಡಿ ವಂಚಕರು ಆರಂಭದಲ್ಲಿ 50 ಸಾವಿರ ಕಟ್ಟಿಸಿಕೊಂಡಿದ್ದರು. ಹಣ ದ್ವಿಗುಣವಾಗಿದೆ ಎಂದು ವಾಟ್ಸ್ಆ್ಯಪ್ ಮಾಡಿ ಕಳೆದ ಮಾರ್ಚ್ನಿಂದ ಜೂನ್ ವರೆಗೂ ಹಂತ - ಹಂತವಾಗಿ 1.50 ಕೋಟಿ ಪಾವತಿಸಿಕೊಂಡು ವಂಚಿಸಿದ್ದರು. ಈ ಸಂಬಂಧ ದೂರು ನೀಡಲಾಗಿತ್ತು. ದೂರು ಮೇರೆಗೆ ಹಣ ಬ್ಯಾಂಕ್ ಖಾತೆ ಹೊಂದಿದ್ದ ಚಿಕ್ಕಮಗಳೂರಿನ ಮೂಲದ ಕೆಂಚೇಗೌಡ, ರಘು ಲಕ್ಷ್ಮೀ, ಮಾಲಾ ಹಾಗೂ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಕಿಶೋರ್, ಸೇಲ್ಸ್ ಎಕ್ಸಿಕ್ಯೂಟಿವ್ಗಳಾದ ಮನೋಹರ್, ರಾಕೇಶ್ ಹಾಗೂ ಕಾರ್ತಿಕ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ 29 ಲಕ್ಷ ಹಣವನ್ನ ಫ್ರೀಜ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ವಂಚನೆಯೇ ಇವರ ಕಾಯಕ:ಆರೋಪಿಗಳೆಲ್ಲರೂ ವಂಚನೆ ಕಾಯಕದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದರು. ಷೇರ್ ಟ್ರೇಡಿಂಗ್ನಲ್ಲಿ ಹಣ ಹೂಡಿದರೆ ಡಬಲ್ ಮಾಡಿ ಕೊಡುವುದಾಗಿ ನಂಬಿಸುತ್ತಿದ್ದರು. ಬಂಧಿತರಾಗಿರುವ ಚಿಕ್ಕಮಗಳೂರಿನ ಮೂಲದ ನಾಲ್ವರು ಆರೋಪಿಗಳಿಗೆ ತಲೆಮರೆಸಿಕೊಂಡಿರುವ ಆರೋಪಿ ನಾಗರಬಾವಿಯಲ್ಲಿ ಬ್ಯಾಂಕ್ ಖಾತೆ ಮಾಡಿಸಿಕೊಟ್ಟಿದ್ದ. ವಂಚನೆ ಕೃತ್ಯದಲ್ಲಿ ತೊಡಗಿಸಿಕೊಂಡರೆ ಕಮೀಷನ್ ನೀಡುವುದಾಗಿ ಆಮಿಷವೊಡ್ಡಿದ್ದ. ಇದರಂತೆ ದೂರುದಾರನಿಂದ 50 ಸಾವಿರ ಕಟ್ಟಸಿಕೊಂಡು ವಿಐಪಿ ಟ್ರೇಡಿಂಗ್ ವಾಟ್ಸಾಪ್ ಗ್ರೂಪ್ ರಚಿಸಿದ್ದರು.
ಸಾರ್ವಜನಿಕರಿಂದ ಹಣ ಪಾವತಿಸಿಕೊಂಡ ಬಳಿಕ ನಂಬಿಕೆ ಬರಿಸಲು ಹಣ ದ್ವಿಗುಣವಾಗಿರುವುದಾಗಿ ಸಂದೇಶ ಕಳುಹಿಸುತ್ತಿದ್ದರು. ವಂಚಕರ ಅಣತಿಯಂತೆ ಹಂತ ಹಂತವಾಗಿ ದೂರುದಾರರು 1.50 ಕೋಟಿ ಹಣ ವರ್ಗಾಯಿಸಿದ್ದರು. ಹೂಡಿಕೆ ಮಾಡಿದ ಹಣ 28 ಕೋಟಿ ರೂಪಾಯಿ ಆಗಿದೆ. ಹಣ ವರ್ಗಾವಣೆಯಾಗಬೇಕಾದರೆ ಮ್ಯಾನೇಜ್ಮೆಂಟ್ ಶುಲ್ಕ 75 ಲಕ್ಷ ಹಣ ಪಾವತಿಸಬೇಕೆಂದು ಆರೋಪಿಗಳು ತಾಕೀತು ಮಾಡಿದ್ದರು. ಇದರಿಂದ ಅನುಮಾನಗೊಂಡ ದೂರುದಾರ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
97 ಕೋಟಿ ರೂ ವ್ಯವಹಾರ:ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡ ಪೊಲೀಸರು, ಆರೋಪಿತರ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಎನ್ಸಿಆರ್ ಪೋರ್ಟಲ್ನಲ್ಲಿ ವಂಚಕರ ವಿರುದ್ಧ 254 ಪ್ರಕರಣ ದಾಖಲಾಗಿದ್ದು, ಸುಮಾರು 97 ಕೋಟಿ ರೂ.ವಹಿವಾಟು ನಡೆದಿರುವುದು ಕಂಡುಬಂದಿತ್ತು. ನಾಗರಭಾವಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಹೋಗಿ ಪರಿಶೀಲಿಸಿದಾಗ ಆರೋಪಿತರು ಬೆಂಗಳೂರು ನಗರದಲ್ಲಿ ವಾಸ ಹಾಗೂ ಬಿಸೆನೆಸ್ ನಡೆಸುತ್ತಿರುವ ದಾಖಲಾತಿಯನ್ನ ಬ್ಯಾಂಕ್ ಸಿಬ್ಬಂದಿ ಪಡೆದುಕೊಂಡಿರಲಿಲ್ಲ.
ಅಲ್ಲದೆ ಇದೇ ಶಾಖೆಯಲ್ಲಿ ಇನ್ನೂ ನಾಲ್ಕು ಅಕೌಂಟ್ ಸೇರಿ ಒಟ್ಟು 6 ಖಾತೆಗಳಿಂದ ಸುಮಾರು 97 ಕೋಟಿ ಹಣ ವಹಿವಾಟು ನಡೆದಿರುವುದು ಕಂಡುಬಂದಿದೆ. ತನಿಖೆಯಲ್ಲಿ ಬ್ಯಾಂಕ್ ನೌಕರರ ಅಕ್ರಮ ಕಂಡುಬಂದಿದೆ. ಬ್ಯಾಂಕ್ ನೌಕರರು ನೀಡಿದ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ. ವಂಚನೆ ಕೃತ್ಯದಲ್ಲಿ ಇನ್ನೂ 9 ಮಂದಿ ಆರೋಪಿಗಳು ಭಾಗಿಯಾಗಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧಕಾರ್ಯ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 2,200 ಕೋಟಿ ರೂ. ಟ್ರೇಡಿಂಗ್ ಹಗರಣ: ನಟಿ ಸುಮಿ ಬೋರಾ ಖಾತೆಗೆ 20 ಕೋಟಿ ರೂ. ವರ್ಗಾವಣೆ ಆರೋಪ - Assam Online Trading Scam