ಉಡುಪಿ: ಮಳೆಗಾಲ ಕಳೆದು ಸಮುದ್ರ ಶಾಂತವಾಗುತ್ತಿದ್ದಂತೆ ಜಿಲ್ಲೆಯ ಕಡಲ ತೀರಗಳಲ್ಲಿ ಮತ್ತೆ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿದ್ದು, ಜಲಕ್ರೀಡೆಗಳ (ವಾಟರ್ ಸ್ಪೋರ್ಟ್ಸ್) ಮೋಜು ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಉಡುಪಿಯ ಮಲ್ಪೆ, ಕಾಪು, ಕುಂದಾಪುರ ಬೀಚ್‌ಗಳಲ್ಲಿ ಪವರ್ ಬೋಟ್‌ಗಳು ಅಬ್ಬರಿಸಿದರೆ, ಪ್ಯಾರಾಸೈಲಿಂಗ್ ಪ್ರವಾಸಿಗರ ಆನಂದವನ್ನು ಆಕಾಶದೆತ್ತರಕ್ಕೇರಿಸುತ್ತಿದೆ. ಹಿನ್ನೀರು ಪ್ರದೇಶಗಳಲ್ಲಿ ಕಯಾಕಿಂಗ್ ಪ್ರವಾಸಿಗರ ಆನಂದವನ್ನು ಹೆಚ್ಚಿಸುತ್ತಿವೆ. ಜೆಟ್ ರೈಡ್, ಬನಾನ ಬೋಟ್ ರೈಡ್, ಪವರ್ ಬೋಟ್ ರೈಡ್, ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಮುದ ನೀಡುತ್ತಿವೆ. ರಜಾದಿನಗಳಲ್ಲಿ ಹಾಗೂ ವಾರಾಂತ್ಯಗಳಲ್ಲಿ ಬೀಚ್‌ಗಳಿಗೆ ಭೇಟಿ ನೀಡುವ ಸ್ಥಳೀಯರು ಸೇರಿ ಪ್ರವಾಸಿಗರ ಸಂಖ್ಯೆ ದಿನ ದಿನವೂ ಏರುತ್ತಿದೆ.
ಮಲ್ಪೆ, ಕಾಪು, ಕುಂದಾಪುರ ಬೀಚ್‌ಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಆರಂಭ (ETV Bharat) ಫ್ಲೋಟಿಂಗ್ ಬ್ರಿಡ್ಜ್, ಸ್ಕೂಬಾ ಡೈವಿಂಗ್ಗೆ ಉತ್ತಮ ಪ್ರತಿಕ್ರಿಯೆ: ಮಲ್ಪೆಯ ಫ್ಲೋಟಿಂಗ್ ಬ್ರಿಡ್ಜ್‌ಗೆ (ತೇಲುವ ಸೇತುವೆ) ವಾರಾಂತ್ಯದಲ್ಲಿ ಸಾವಿರಕ್ಕೂ ಹೆಚ್ಚು ಜನ ತೆರಳುತ್ತಾರೆ. ಈ ಬಾರಿಯೂ ಪ್ರವಾಸಿಗರನ್ನು ಆಕರ್ಷಿಸಲು ಬ್ಲಾಗರ್ಸ್ ಮೀಟ್ ಮಾಡಲಾಗುವುದು. ಪ್ರವಾಸಿಗರನ್ನು ಆಕರ್ಷಿಸಲು ಕಾಪು ಮತ್ತು ಕೊಡಿಯಲ್ಲಿ ಸ್ಕೂಬಾ ಡೈವಿಂಗ್ ಆರಂಭಿಸಿದ್ದು, ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ.
ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಆಕರ್ಷಕ ಮರವಂತೆ ಬೀಚ್ (ETV Bharat) ಮಲ್ಪೆ ಬೀಚ್‌ಗೆ ದಿನಕ್ಕೆ 15-18 ಸಾವಿರ ಜನರ ಭೇಟಿ: ಮಲ್ಪೆ ಬೀಚ್‌ಗೆ ವಾರಂತ್ಯದಲ್ಲಿ ಒಂದೇ ದಿನ 15 ಸಾವಿರದಿಂದ 18 ಸಾವಿರ ಜನರು ಭೇಟಿ ನೀಡುತ್ತಾರೆ. ಸರಣಿ ರಜೆ ಇದ್ದರೆ ದಿನಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ರಜಾ ದಿನಗಳಲ್ಲಿ ಬೆಳಿಗ್ಗೆಯಿಂದಲೇ ಜನರು ಮಲ್ಪೆ ಬೀಚ್‌ಗೆ ಭೇಟಿ ನೀಡುತ್ತಾರೆ. ಚಂಡಮಾರುತ ಕಾರಣದಿಂದ ಮಳೆ ಬಂದರೆ ಬೀಚ್‌ಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸಬೇಕಾಗುತ್ತದೆ. ಪ್ರತೀ ವರ್ಷವೂ ಡಿಸೆಂಬರ್ ತಿಂಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕ್ರಿಸ್‌ಮಸ್ ರಜೆ ಇರುವುದರಿಂದ ಬೇರೆ ರಾಜ್ಯಗಳ ಜನರೂ ಬರುತ್ತಾರೆ ಎಂದು ಇಲಾಖೆ ಮೂಲಗಳು ಹೇಳಿವೆ.
ಕಯಾಕಿಂಗ್‌ನಲ್ಲಿ ತೊಡಗಿರುವ ಪ್ರವಾಸಿಗರು (ETV Bharat) ಜಿಲ್ಲೆಯ ದೇಗುಲಗಳಲ್ಲಿ ಸರತಿ ಸಾಲು: ಇಲ್ಲಿನ ದೇವಾಲಯಗಳಿಗೆ ಬರುವ ಜನರು ಬೀಚ್‌ಗಳಿಗೂ ಭೇಟಿ ನೀಡಿ, ಜಲಕ್ರೀಡೆಗಳ ಆನಂದ ಸವಿದೇ ಊರಿಗೆ ಮರಳುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳಿಗೆ ಉತ್ತರ ಕರ್ನಾಟಕ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇವರಲ್ಲಿ ಬಹುತೇಕರು ಕುಂದಾಪುರ, ಮಲ್ಪೆ ಬೀಚ್‌ಗಳಿಗೆ ಭೇಟಿ ನೀಡಿಯೇ ಮನೆಗೆ ಮರಳುತ್ತಾರೆ. ಹೆಜಮಾಡಿ, ಮರವಂತೆ, ಸಾಲಿಗ್ರಾಮ ಮೊದಲಾದೆಡೆ ಹಿನ್ನೀರಿನಲ್ಲಿ ಕಯಾಕಿಂಗ್ ಸೌಲಭ್ಯವಿದ್ದು, ಇಲ್ಲಿಗೂ ಸಹ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಉಡುಪಿಯಲ್ಲಿ ಪ್ರವಾಸಿಗರು (ETV Bharat) ಸುರಕ್ಷತೆ, ಸ್ವಚ್ಛತೆಗೆ ಆದ್ಯತೆ: ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು ಪ್ರತಿಕ್ರಿಯಿಸಿದ್ದು, ''ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರವಾಸಿಗರನ್ನು ನೀರಿನಲ್ಲಿ ಕರೆದುಕೊಂಡು ಹೋಗುವಾಗ ಲೈಫ್ ಜಾಕೆಟ್ ಹಾಕಿಕೊಂಡಿರಬೇಕು, ಅವರ ರಕ್ಷಣೆಗೆ ಜೀವರಕ್ಷಕರು ಅಲ್ಲಿರಬೇಕು, ಪ್ರವಾಸಿಗರಿಗೆ ಟಾಯ್ಲೆಟ್, ಬಾತ್ರೂಮ್ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಪ್ರಮುಖವಾಗಿವೆ. ಪ್ರವಾಸಿಗರ ರಕ್ಷಣೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳುತ್ತಿದ್ದೇವೆ'' ಎಂದರು.
ಕಡಲ ತೀರದಲ್ಲಿ ಪ್ರವಾಸಿಗರ ಕಲರವ (ETV Bharat) ಪ್ರವಾಸಿಗರು ಹೇಳಿದ್ದೇನು?: ಪ್ರವಾಸಿಗರಾದ ಸುಚಿತಾ ಮಾತನಾಡಿ, "ಬೆಳಿಗ್ಗೆ ಸೈಂಟ್ ಮೇರಿಸ್ ದ್ವೀಪ ನೋಡಿದ್ವಿ. ಇಲ್ಲಿಗೆ ಬರುವ ಒಂದು ಅನುಭವವೇ ಬೇರೆ. ವೀಕೆಂಡ್ನಲ್ಲಿ ಇಲ್ಲಿಗೆ ಬರುವಂತಹ ಜಾಗವಿದು. ಇಷ್ಟೊಂದು ಚೆನ್ನಾಗಿರುವ ಜಾಗ ನಮ್ಮಲ್ಲಿಯೇ ಇರಬೇಕಾದ್ರೆ, ಬೇರೆ ರಾಜ್ಯ, ದೇಶಗಳಿಗೆ ಏಕೆ ಹೋಗಬೇಕು?. ನಮ್ಮ ರಾಜ್ಯದ ಪ್ರವಾಸಿ ಸ್ಥಳಗಳನ್ನು ನೋಡಿ ನಾವೇ ಅವುಗಳನ್ನು ಜನಪ್ರಿಯಗೊಳಿಸಬೇಕು" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಉಡುಪಿ: ಮಲ್ಪೆ ಬೀಚ್ಗಿದ್ದ ಮಳೆಗಾಲದ ನಿಷೇಧ ಇನ್ನೂ ಮುಗಿದಿಲ್ಲ, ಪ್ರವಾಸಿಗರಲ್ಲಿ ನಿರಾಸೆ