ಬೆಂಗಳೂರು:ಇಂದು ರಾಜ್ಯದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿ ಮರುಪರೀಕ್ಷೆ ನಡೆಯುತ್ತಿದೆ. ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಕಲ ಸಿದ್ಧತೆ ಮಾಡಿಕೊಂಡಿದೆ. 54 ಸಾವಿರ ಅಭ್ಯರ್ಥಿಗಳು ಮರುಪರೀಕ್ಷೆ ಬರೆಯುತ್ತಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಬಿಗಿ ಬಂದೋಬಸ್ತ್ ಕಂಡುಬಂತು. ಪ್ರತಿ ಕೇಂದ್ರಕ್ಕೆ ಆರು ಮಂದಿ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಬೆಟಾಲಿಯನ್ ಪೊಲೀಸರು ಪರೀಕ್ಷಾ ಕರ್ತವ್ಯದಲ್ಲಿದ್ದಾರೆ.
ನಿಷೇಧಾಜ್ಞೆ ಜಾರಿ:ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಮಪ್ತಿಯಲ್ಲೂ ಪೊಲೀಸರು ಕಣ್ಗಾವಲಿರಿಸಿದ್ದಾರೆ.
ಅನುಮಾನಸ್ಪದವಾಗಿ ಓಡಾಡುವವರು, ಗಾಳಿ ಸುದ್ದಿ ಹಬ್ಬಿಸುವ ಕಿಡಿಗೇಡಿಗಳು, ಜೆರಾಕ್ಸ್ ಹಾಗೂ ಹತ್ತಿರದ ಸೈಬರ್ ಸೆಂಟರ್‌ಗಳ ಮೇಲೆ ನಿಗಾ ಇಡಲಾಗಿದೆ. ಲೋಹಶೋಧಕ ಯಂತ್ರದ ಮೂಲಕ ಪ್ರತಿ ಅಭ್ಯರ್ಥಿಯ ತಪಾಸಣೆ ನಡೆಸಲಾಗುತ್ತಿದ್ದು, ಪರೀಕ್ಷಾ ಕೇಂದ್ರಕ್ಕೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ವದಂತಿ ಹಬ್ಬಿಸುವವರ ಮಾತಿಗೆ ಕಿವಿಗೊಡದಂತೆ ಅಭ್ಯರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ನಾಳೆ ಪಿಎಸ್ಐ ಮರುಪರೀಕ್ಷೆ: ನಿರ್ಭೀತಿಯಿಂದ ಪರೀಕ್ಷೆ ಬರೆಯುವಂತೆ ಶುಭ ಕೋರಿದ ಪರಮೇಶ್ವರ್