ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಜಾತ್ರೆ ವೇಳೆ ಬೈಕ್ ಹಾಯ್ದು ಅಪಘಾತ, ಮೂವರು ಯುವಕರು ಸಾವು - Muddebihal Bike Accident - MUDDEBIHAL BIKE ACCIDENT

ಮುದ್ದೇಬಿಹಾಳ ತಾಲೂಕಿನ ಕುಂಟೋಜಿಯಲ್ಲಿ ಜಾತ್ರೆಯ ವೇಳೆ ಅಪಘಾತ ಸಂಭವಿಸಿದ್ದು ಮೂವರು ಯುವಕರು ಸಾವನ್ನಪ್ಪಿದ್ದಾರೆ.

ಕುಂಟೋಜಿಯಲ್ಲಿ ಅಪಘಾತ
ಕುಂಟೋಜಿಯಲ್ಲಿ ಅಪಘಾತ (ETV Bharat)

By ETV Bharat Karnataka Team

Published : Sep 6, 2024, 11:59 AM IST

ಕುಂಟೋಜಿಯಲ್ಲಿ ಅಪಘಾತ (ETV Bharat)

ವಿಜಯಪುರ:ವೇಗವಾಗಿ ಬಂದು ರಸ್ತೆಬದಿಯಲ್ಲಿದವರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಬಳಿ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.

ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲಗಲದಿನ್ನಿ ಗ್ರಾಮದ ಉದಯಕುಮಾರ (19), ಹಂಚಲಿ ಅನಿಲ ಕೈನೂರ (27) ಮತ್ತು ಗೊಟಖಂಡಕಿ ನಿಂಗರಾಜ ಚೌಧರಿ (22) ಮೃತಪಟ್ಟವರು. ಮಲಗಲದಿನ್ನಿಯ ರಾಯಪ್ಪ ಮಹಾಂತೇಶ ಬಾಗೇವಾಡಿ (24), ಹಣಮಂತ ಹುಲ್ಲಪ್ಪ ಕುರಬಗೌಡರ (18), ಪ್ರಶಾಂತ ಹುಲ್ಲಪ್ಪ ಕುರಬಗೌಡರ (16), ಶಾಹೀದ್ ಕಾಶಿಮಸಾಬ ಹುನಗುಂದ (18) ಮತ್ತು ನಾಗಬೇನಾಳ ಗ್ರಾಮದ ಶಂಕ್ರಪ್ಪ ಯಮನಪ್ಪ ಕೊಂಡಗೂಳಿ (19) ಗಾಯಗೊಂಡವರು. ನಿಂಗರಾಜ ಮತ್ತು ಅನಿಲ್ ಅಪಾಯಕಾರಿಯಾಗಿ ಬೈಕ್ ಚಲಾಯಿಸಿ ರಸ್ತೆ ಬದಿ ನಿಂತಿದ್ದವರಿಗೆ ಡಿಕ್ಕಿ ಹೊಡೆದರು ಎನ್ನಲಾಗುತ್ತಿದೆ.

ಜಾತ್ರೆ ವೇಳೆ ಅವಘಡ: ಕುಂಟೋಜಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತಿದ್ದು, ವಿವಿಧ ಶಕ್ತಿ ಪ್ರದರ್ಶನದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆ, ನಾಟಕ ನೋಡಲು ಅಕ್ಕಪಕ್ಕದ ಊರುಗಳಿಂದ ಯುವಕರು ಆಗಮಿಸಿದ್ದರು. ಮಲಗಲದಿನ್ನಿಯಿಂದ ಟಂಟಂ ವಾಹನದಲ್ಲಿ ಜನರು ನಾಟಕ ನೋಡಲು ಆಗಮಿಸಿದ್ದರು. ಈ ವೇಳೆ ವಾಹನದಿಂದ ಕೆಳಗಿಳಿದು ಹೋಗುವಾಗ ಬೈಕ್​ ಸವಾರರು ಬಂದು ಡಿಕ್ಕಿ ಹೊಡೆದಿದ್ದಾರೆ.

ಎಸ್​ಪಿ ಮಾಹಿತಿ: ಘಟನಾ ಸ್ಥಳಕ್ಕೆ ಎಸ್​ಪಿ ಋಷಿಕೇಶ್‌ ಸೋನವಾಣೆ ಭೇಟಿ ನೀಡಿ ಪರಿಶೀಲಿಸಿದರು. "ರಾತ್ರಿ 11ರ ಸುಮಾರಿಗೆ ಅಪಘಾತ ಘಟನೆ ನಡೆದಿದೆ. ಜಾತ್ರೆಯ ನಾಟಕ ನೋಡಲು ಆಗಮಿಸಿದ್ದವರು ಟಂಟಂ ವಾಹನ ಕೆಳಗಿಳಿದು ಹೋಗುವಾಗ ಎದುರಿನಿಂದ ಬಂದ ಬೈಕ್ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಪ್ರಯಾಣದ ವೇಳೆ ಜನರು ಎಚ್ಚರಿಕೆಯಿಂದ ಇರಬೇಕು, ಜೊತೆ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿಕೊಳ್ಳಬೇಕು" ಎಂದು ಎಸ್​ಪಿ ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಆರೋಗ್ಯ ಕವಚ ಆಂಬ್ಯುಲೆನ್ಸ್ ಇಎಂಟಿ, ಚಲನಚಿತ್ರ ನಟರೂ ಆಗಿರುವ ಶ್ರೀಶೈಲ ಹೂಗಾರ ಸಿಬ್ಬಂದಿ ಸಮೇತ ಸ್ಥಳಕ್ಕೆ ಧಾವಿಸಿ‌ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ: ಮಗಳು ಗರ್ಭಿಣಿ ಎಂದು ಸುಳ್ಳು ಸುದ್ದಿ: ಕೋಪದಲ್ಲಿ ಸ್ವಂತ ತಮ್ಮನ ಕೊಂದ ಅಣ್ಣ - Belagavi Murder Case

ABOUT THE AUTHOR

...view details