ಬೆಳಗಾವಿ:ಚೆನ್ನಮ್ಮನ ಕಿತ್ತೂರಿನಲ್ಲಿ ಅ.23ರಿಂದ 25ರವರೆಗೆ ಮೂರು ದಿನಗಳ ಕಾಲ ಸಂಭ್ರಮದ ಉತ್ಸವ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು.
23ರಂದು ಸಂಜೆ 7ಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ಸವ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಶನಿವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ, "ಕಾರ್ಯಕ್ರಮ ಪಟ್ಟಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವ ಉದ್ಘಾಟಿಸಬೇಕಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಬೇಕಿತ್ತು. ಆದರೆ, ಕಾರಣಾಂತರದಿಂದ ಅಂದು ಅವರಿಗೆ ಬರಲಾಗುತ್ತಿಲ್ಲ. ಇಬ್ಬರೂ ನಾಯಕರು 25ರಂದು ರಾತ್ರಿ 8ಕ್ಕೆ ನಡೆಯುವ ಸಮಾರೋಪ ಸಮಾರಂಭಕ್ಕೆ ಬರಲು ಒಪ್ಪಿದ್ದಾರೆ. ಕಿತ್ತೂರು ಉತ್ಸವ ಉದ್ಘಾಟಿಸಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಸಿಎಂ 23ರಂದು ಬರುತ್ತಿಲ್ಲ ಎಂಬುದು ಶುದ್ಧ ಸುಳ್ಳು" ಎಂದು ಹೇಳಿದರು.
"200ನೇ ಚನ್ನಮ್ಮ ವಿಜಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಈ ಬಾರಿ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ. ಅನುದಾನ ಘೋಷಿಸಿದೆ. ಒಂದೆರಡು ದಿನಗಳಲ್ಲಿ ಸಂಪೂರ್ಣ ಅನುದಾನ ಬಿಡುಗಡೆಯಾಗಲಿದೆ. ಕಿತ್ತೂರು ಕೋಟೆ ಆವರಣದಲ್ಲಿ ರಾಣಿ ಚನ್ನಮ್ಮ ಮುಖ್ಯ ವೇದಿಕೆ ನಿರ್ಮಿಸಲಾಗಿದ್ದು, ವೇದಿಕೆ ಮುಂಭಾಗದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ 'ಸರದಾರ ಗುರುಸಿದ್ದಪ್ಪ ವೇದಿಕೆ' ನಿರ್ಮಿಸಲಾಗಿದೆ. ಎರಡೂ ಕಡೆ ಮೂರು ದಿನ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ" ಎಂದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ಕಡೆಗಣಿಸುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, "ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದಂತೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೂ ಸರ್ಕಾರ ಆದ್ಯತೆ ಕೊಟ್ಟಿದೆ. ಈ ವರ್ಷ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು 50 ಕೋಟಿ ರೂ.ಗೂ ಅಧಿಕ ಅನುದಾನವನ್ನೂ ನೀಡಿದೆ. ಈ ಹಣದಲ್ಲೇ ಅನೇಕ ಅಭಿವೃದ್ಧಿ ಕೆಲಸ ಕೈಗೊಳ್ಳುತ್ತಿದ್ದೇವೆ. ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಸ್ಮಾರಕಗಳು ಮತ್ತು ಚೆನ್ನಮ್ಮನ ಜನ್ಮಸ್ಥಳವಾದ ಕಾಕತಿಯನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು" ಎಂದು ತಿಳಿಸಿದರು.