ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

ಗಾಂಧೀಜಿಗೂ ಬೆಳಗಾವಿಗೂ ಇದೆ ವಿಶೇಷ ನಂಟು: ಕುಂದಾನಗರಿಗೆ ಬಾಪೂಜಿ ಬಂದಿದ್ದು ಎಷ್ಟು ಬಾರಿ ಗೊತ್ತಾ? - Gandhiji Belagavi Relation

ಮಹಾತ್ಮ ಗಾಂಧೀಜಿಗೂ ಬೆಳಗಾವಿಗೂ ಅವಿನಾಭಾವ ಸಂಬಂಧವಿದ್ದು, ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ನಡೆದ ಕಾಂಗ್ರೆಸ್​ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿದ್ದರು.

Gandhi Jayanthi Special
ಗಾಂಧಿ ಜಯಂತಿ ವಿಶೇಷ (ETV Bharat)

ಬೆಳಗಾವಿ: ಮಹಾತ್ಮ ಗಾಂಧೀಜಿ ಬರಿಗಾಲ ಫಕೀರನಂತೆ ಇಡೀ ದೇಶ ಸುತ್ತಿದವರು‌. ಸ್ವಾತಂತ್ರ್ಯ ಸಂಗ್ರಾಮವನ್ನು ಜನರ ಚಳವಳಿಯನ್ನಾಗಿಸಿ, ಅಹಿಂಸಾ ಮಾರ್ಗದ ಮೂಲಕ ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಮುಕ್ತಗೊಳಿಸಿದವರು. ಬಾಪೂಜಿಗೂ ಬೆಳಗಾವಿಗೂ ಇದೆ ಅವಿನಾಭಾವ ಸಂಬಂಧ, ಗಾಂಧಿ ಜಯಂತಿ ದಿನ ಆ ಕುರಿತ ವಿಶೇಷ ವರದಿ ಇಲ್ಲಿದೆ.

ಹೌದು, ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಂದೇ ಬಾರಿ. ಅದು ನಡೆದಿದ್ದು ಬೆಳಗಾವಿಯಲ್ಲಿ. ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನಿರ್ಣಯ ಕೈಗೊಂಡಿದ್ದು ಇಲ್ಲಿಯೇ. ಹೀಗೆ ಅವರು ಬೆಳಗಾವಿ ಜಿಲ್ಲೆಗೆ ಒಂದೇ ಬಾರಿ ಭೇಟಿ ಕೊಟ್ಟಿಲ್ಲ. ಒಟ್ಟು ಆರು ಸಲ ಬಂದಿದ್ದು ಬೆಳಗಾವಿ ಬಗೆಗಿನ ಅವರ ಬಾಂಧವ್ಯವನ್ನು ತೆರೆದಿಡುತ್ತದೆ.

ಗಾಂಧಿ ಜಯಂತಿ ವಿಶೇಷ (ETV Bharat)

ಹಿರಿಯ ಪತ್ರಕರ್ತ ಸುಭಾಷ್​ ಕುಲಕರ್ಣಿ ಹೇಳುವಂತೆ, "1915ರಲ್ಲಿ ಆಗಷ್ಟೇ ಮೋಹನದಾಸ್ ಕರಮಚಂದ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿ ಭಾರತ ದೇಶಕ್ಕೆ ಮರಳಿದ್ದರು. ಅದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ ಭುಗಿಲೆದ್ದಿತ್ತು. ಗುರುಗಳಾದ ಗೋಪಾಲಕೃಷ್ಣ ಗೋಖಲೆ ಗಾಂಧೀಜಿಗೆ ದೇಶ ಸುತ್ತಿ, ಜನರನ್ನು ಬಡಿದೆಚ್ಚರಿಸುವಂತೆ ಕರೆ ನೀಡಿದ್ದರು. ಗುರುಗಳ ಮಾತನ್ನೇ ಧ್ಯೇಯವಾಕ್ಯವಾಗಿ ಮಾಡಿಕೊಂಡಿದ್ದ ಗಾಂಧೀಜಿ 1916ರಲ್ಲಿ ಬಾಲಗಂಗಾಧರ ತಿಲಕರ ಜೊತೆಗೆ ಬೆಳಗಾವಿಗೆ ಬರಲು ನಿರ್ಧರಿಸಿದ್ದರು. ಆಗ ಬೆಳಗಾವಿಯ ಕೆಲ ಯುವಕರು ಗಾಂಧೀಜಿಗೆ ಪತ್ರ ಬರೆದು, ನೀವು ಬೆಳಗಾವಿಗೆ ಬರಬಾರದು ಎಂದೂ ಆಗ್ರಹಿಸಿದ್ದರು''.

''ಇದರಿಂದ ಸ್ವಲ್ಪವೂ ವಿಚಲಿತರಾಗದ ಗಾಂಧೀಜಿ ವಾಪಸ್ ಆ ಯುವಕರಿಗೆ ಪತ್ರ ಬರೆದು ನನ್ನ ಸಾವಿನ ಹೊರತಾಗಿ ಯಾವ ಶಕ್ತಿಯು ಬೆಳಗಾವಿಗೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದರು. ಆ ಪ್ರಕಾರ ಬೆಳಗಾವಿಗೆ ಗಾಂಧೀಜಿ ಬಂದಿದ್ದರು. 1916ರ ಎಪ್ರೀಲ್ 27ರಿಂದ ಮೇ 1ರವರೆಗೆ ತಿಲಕರ ಜೊತೆಗೂಡಿ ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಹುರಿದುಂಬಿಸಿದ್ದರು. ಆಗ ಅವರಿಗೆ ಸ್ಥಳೀಯ ಹೋರಾಟಗಾರರಾದ ಕರ್ನಾಟಕ ಸಿಂಹ ಗಂಗಾಧರ ರಾವ್ ದೇಶಪಾಂಡೆ, ಗೋವಿಂದರಾವ್ ಯಾಳಗಿ ಸೇರಿ ಮತ್ತಿತರರು ಸಾಥ್ ಕೊಟ್ಟಿದ್ದರು" ಎನ್ನುತ್ತಾರೆ ಸುಭಾಷ್​ ಕುಲಕರ್ಣಿ.

"ಅದಾದ ಬಳಿಕ ಸ್ವಾತಂತ್ರ್ಯ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮತ್ತೆ 1920ರ ನವೆಂಬರ್ 8, 9ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಗಾಂಧೀಜಿ ವಾಸ್ತವ್ಯ ಹೂಡಿದ್ದರು. ಇಷ್ಟಕ್ಕೆ ಬೆಳಗಾವಿ ಜೊತೆಗಿನ ಗಾಂಧೀಜಿ ನಂಟು ಮುಗಿಯುವುದಿಲ್ಲ. 1924ರ ಡಿ.26, 27ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ನಡೆದ 39ನೇ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಬಾಪೂಜಿ ವಹಿಸಿದ್ದರು. ಇದು ಚರಿತ್ರೆಯಲ್ಲಿ ದಾಖಲಾರ್ಹ ಸಂಗತಿ. ಯಾಕೆಂದರೆ ಮತ್ತೆಂದೂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿಕೊಂಡಿಲ್ಲ. ಹಾಗಾಗಿ, ಬೆಳಗಾವಿ ಗಾಂಧೀಜಿ ಜೀವನದಲ್ಲಿ ಎಂದೂ ಮರೆಯದ ಪುಣ್ಯಭೂಮಿ ಎಂದರೆ ಅತೀಶಯೋಕ್ತಿ ಆಗದು. ಅಧಿವೇಶನಕ್ಕೆ ಬಂದಿದ್ದ ಗಾಂಧೀಜಿ ಬರೊಬ್ಬರಿ 15 ದಿ‌ನಗಳ ಕಾಲ ಬೆಳಗಾವಿಯಲ್ಲೇ ಇದ್ದು, ಚಳುವಳಿ ಬಗ್ಗೆ ಜನಜಾಗೃತಿ ಮೂಡಿಸಿದ್ದರು" ಎಂದು ಸುಭಾಷ್​ ಕುಲಕರ್ಣಿ ಹೇಳಿದರು.

"ಇಷ್ಟಕ್ಕೆ ಗಾಂಧೀಜಿ ಬೆಳಗಾವಿ ಪಯಣ ಮುಗಿಯಲ್ಲ. 1927ರ ಏಪ್ರಿಲ್ 18, 19ರಂದು ಬೆಂಗಳೂರಿನಿಂದ ಬರುವಾಗ ಎರಡು ದಿನ ಬೆಳಗಾವಿಯಲ್ಲಿ ಇದ್ದು ಮುಂದೆ ಮಹಾರಾಷ್ಟ್ರಕ್ಕೆ ಹೋಗಿದ್ದರು. ಇನ್ನು 1934ರ ಮಾರ್ಚ್ 4-7ರವರೆಗೆ 4 ದಿನ ಬೆಳಗಾವಿ, ನಿಪ್ಪಾಣಿ, ಅಥಣಿ ತಾಲೂಕಿ‌ನ ಶೇಡಬಾಳದಲ್ಲಿ ಇರುವ ಗಾಂಧೀಜಿ ಮುಂದೆ ಮೀರಜ್​ಗೆ ಹೋಗಿದ್ದರು. ಇದಾದ ಬಳಿಕ ಗಂಗಾಧರ ರಾವ್ ದೇಶಪಾಂಡೆಯವರ ಹುಟ್ಟೂರು ಹುದಲಿಯಲ್ಲಿ 1937ರ ಏಪ್ರಿಲ್ 17ರಿಂದ 23ರವರೆಗೆ ನಡೆದ ಗಾಂಧಿಸೇವಾ ಸಂಘದ ಸಮ್ಮೇಳನದಲ್ಲಿ ಗಾಂಧೀಜಿ ಭಾಗವಹಿಸಿದ್ದರು. ಈ ವೇಳೆ ಬಾಪೂಜಿ ಉಳಿದುಕೊಳ್ಳಲು ಹುದಲಿ ಗ್ರಾಮದ ಹೊರವಲಯದಲ್ಲಿ ಕುಮರಿ ಆಶ್ರಮ ನಿರ್ಮಿಸಲಾಗಿತ್ತು. 250ಕ್ಕೂ ಅಧಿಕ ಗುಡಿಸಲುಗಳನ್ನು ತಯಾರಿಸಲಾಗಿತ್ತು. ಸಮ್ಮೇಳನದ ಬಳಿಕ ಮತ್ತೆ 8 ದಿನ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದರು. ನಂತರ ಗಾಂಧೀಜಿ ಬೆಳಗಾವಿಗೆ ಆಗಮಿಸಿದ ಉಲ್ಲೇಖವಿಲ್ಲ" ಎಂಬುದು ಸುಭಾಷ ಕುಲಕರ್ಣಿ ಅಭಿಪ್ರಾಯ.

ಗಾಂಧೀಜಿ ನೀರು ಕುಡಿದ ಬಾವಿ ಈಗಲೂ ಇದೆ: ಕಾಂಗ್ರೆಸ್ ಅಧಿವೇಶನಕ್ಕೆ ಅಂತಾನೆ ಬೆಳಗಾವಿಯ ಟಿಳಕವಾಡಿಯಲ್ಲಿ ಹೊಸ ಬಾವಿಯನ್ನೇ ತೋಡಿದ್ದರು. ಗಾಂಧೀಜಿ ಅದೇ ಬಾವಿ ನೀರು ಕುಡಿದಿದ್ದರು. ಅಧಿವೇಶನ ನಡೆದು ನೂರು ವರ್ಷ ಆಗುತ್ತಾ ಬಂದರೂ ಈಗಲೂ ಬಾವಿ ಇದ್ದು, ಅಧಿವೇಶನಕ್ಕೆ ಸಾಕ್ಷಿಯಾಗಿದೆ. ಗಾಂಧೀಜಿ ವಸತಿಗಾಗಿ 300 ರೂ. ಖರ್ಚು ಮಾಡಿ ವ್ಯಾಕ್ಸಿನ್ ಡಿಪೋದಲ್ಲಿ ಬಿದಿರು ಮತ್ತು ಖಾದಿ ಬಟ್ಟೆಯಿಂದ ಗುಡಿಸಲು ತಯಾರಿಸಿದ್ದರು. ಇದರಲ್ಲಿ ನಾನು ಇರಲ್ಲ, ಇಷ್ಟೊಂದು ಖರ್ಚು ಮಾಡುವ ಅವಶ್ಯಕತೆ ಏನಿತ್ತು ಎಂದು ಗಾಂಧೀಜಿ ಪ್ರಶ್ನಿಸಿದ್ದರು. ಆಗ, ಗಂಗಾಧರ ರಾವ್ ದೇಶಪಾಂಡೆ ಅವರು ಅಧಿವೇಶನ ಮುಗಿದ ಬಳಿಕ ಆ ಗುಡಿಸಲಿನ ವಸ್ತುಗಳನ್ನು ಹರಾಜು ಹಾಕುತ್ತೇವೆ ಎಂದು ಮನವೊಲಿಸಿದ ಬಳಿಕ ಅಲ್ಲಿ ಇರಲು ಒಪ್ಪಿದ್ದರು. ಅದೇ ರೀತಿ 200 ರೂ.ಗೆ ಹರಾಜು ಹಾಕಿ ಕಾಂಗ್ರೆಸ್ ಅಧಿವೇಶನದ ಲೆಕ್ಕಕ್ಕೆ ಆ ಹಣವನ್ನು ತೆಗೆದುಕೊಳ್ಳಲಾಗಿತ್ತು.

ಗಾಂಧಿ ಒಡನಾಡಿ ಗಂಗಾಧರ ರಾವ್: ಕರ್ನಾಟಕದ ಮಟ್ಟಿಗೆ ಮಹಾತ್ಮಾ ಗಾಂಧೀಜಿಯವರ ಪರಮಾಪ್ತರಲ್ಲಿ ಬೆಳಗಾವಿಯ ಗಂಗಾಧರ ರಾವ್ ದೇಶಪಾಂಡೆ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಲು, ಗಾಂಧೀಜಿ ಅಧ್ಯಕ್ಷತೆ ವಹಿಸಲು, ಬೆಳಗಾವಿಗೆ ಬಾಪೂಜಿ 6 ಬಾರಿ ಬರುವಲ್ಲಿ ಗಂಗಾಧರ ರಾವ್ ಪ್ರಮುಖ ಪಾತ್ರ ವಹಿಸಿದ್ದರು. ಆರಂಭದಲ್ಲಿ ತಿಲಕರ ಅನುಯಾಯಿಯಾಗಿದ್ದ ಗಂಗಾಧರ ರಾವ್ ನಂತರದಲ್ಲಿ ಅಪ್ಪಟ ಗಾಂಧಿವಾದಿಯಾಗಿ ಬದಲಾಗಿದ್ದರು. ಗಾಂಧೀಜಿ ಜೊತೆಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟಿದ್ದರು‌ ಎಂಬುದು ಬೆಳಗಾವಿಯಲ್ಲಿ ಜನಜನಿತ.

ಇದನ್ನೂ ಓದಿ:'ನನ್ನ ತಿಥಿ ಬೇಡ, ಪ್ರತಿ ವರ್ಷ ಗಾಂಧಿ ಜಯಂತಿ ಆಚರಿಸಿ': ಅಪ್ಪಟ ಗಾಂಧಿವಾದಿಯ ಸ್ಫೂರ್ತಿದಾಯಕ ಕಥೆ - Gandhi Jayanti

ABOUT THE AUTHOR

...view details