ಕರ್ನಾಟಕ

karnataka

ಗಂಗಾವತಿ: ಅಂಜನಾದ್ರಿ ದೇವಸ್ಥಾನ ಹುಂಡಿ ಹಣ ಕದಿಯಲು ಯತ್ನಿಸಿದ ಯುವಕರು - anjanadri hundi counting

By ETV Bharat Karnataka Team

Published : Jul 3, 2024, 1:51 PM IST

ಅಂಜಾನಾದ್ರಿ ದೇಗುಲದ ಹುಂಡಿ ಎಣಿಕೆ ಯುವಕರಿಬ್ಬರು ಹಣ ಕದಿಯಲು ಯತ್ನಿಸಿರುವುದು ಸಿಸಿಟಿಯಲ್ಲಿ ಸೆರೆಯಾಗಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲು ದೇಗುಲದ ವ್ಯವಸ್ಥಾಪಕರು ಸೂಚಿಸಿದ್ದಾರೆ.

ಹುಂಡಿ ಹಣ ಕದಿಯಲು ಯತ್ನಿಸಿದ ಯುವಕರು
ಹುಂಡಿ ಹಣ ಕದಿಯಲು ಯತ್ನಿಸಿದ ಯುವಕರು (ETV Bharat)

ಗಂಗಾವತಿ: ತಾಲೂಕಿನ ಅಂಜನಾದ್ರಿಯಲ್ಲಿರುವ ಆಂಜನೇಯ ದೇಗುಲದಲ್ಲಿ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದ್ದ ಹುಂಡಿಹಣದ ಎಣಿಕೆ ಸಂದರ್ಭದಲ್ಲಿ ಹೊರಗಿನ ಯುವಕರಿಬ್ಬರು ಕೈಚಳಕ ತೋರಿ ಹನುಮಪ್ಪನ ನಿಧಿಗೆ ಕನ್ನ ಹಾಕಲು ಯತ್ನಿಸಿದ ಘಟನೆ ನಡೆದಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಕೊಪ್ಪಳದ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಹಣ ಕದಿಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲಿಸುವಂತೆ ದೇಗುಲದ ವ್ಯವಸ್ಥಾಪಕ ವೆಂಕಟೇಶ ಅವರಿಗೆ ಸೂಚನೆ ನೀಡಿದ್ದಾರೆ. ಆದರೆ ಈವರೆಗೆ ಪ್ರಕರಣ ದಾಖಲಾಗಿಲ್ಲ.

ಸಾಮಾನ್ಯವಾಗಿ ಪ್ರತಿ ಬಾರಿಯೂ ಸಿಸಿ ಕ್ಯಾಮರಾದ ಕಣ್ಗಾವಲಿನಲ್ಲಿ ಹಣ ಎಣಿಕೆ ಕಾರ್ಯ ನಡೆಯುತ್ತಿದೆ. ಸೋಮವಾರ ಹಣ ಎಣಿಕೆ ಸಂದರ್ಭದಲ್ಲಿ ಈ ಇಬ್ಬರು ಯುವಕರು ಸುಮಾರು 20 ಸಾವಿರ ರೂಪಾಯಿ ಮೊತ್ತದ ಹಣವನ್ನು ಜೇಬಿಗೆ ಇಳಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ.

ಅಂಜಾನದ್ರಿ ದೇವಸ್ಥಾನ ಹುಂಡಿ ಎಣಿಕೆ (ETV Bharat)

ಪ್ರತಿ 40 ರಿಂದ 45 ದಿನಕ್ಕೊಮ್ಮೆ ಅಂಜನಾದ್ರಿ ದೇಗುಲದ ಕಾಣಿಕೆ ಪೆಟ್ಟಿಗೆಯಲ್ಲಿನ ಹಣ ಎಣಿಕೆ ಮಾಡಿ ಸಂಗ್ರಹವಾದ ಮೊತ್ತವನ್ನು ಸಣಾಪುರದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತಿದೆ. ಇದೇ ರೀತಿ ಸೋಮವಾರ ದೇಗುಲದ ಕಾಣಿಕೆ ಪೆಟ್ಟಿಗೆಯಲ್ಲಿನ ಹಣ ಎಣಿಕೆ ನಡೆದಿದೆ. ಇದರಲ್ಲಿ ಕಂದಾಯ ಇಲಾಖೆ ಮತ್ತು ದೇಗುಲದ ಸಿಬ್ಬಂದಿಗೆ ಮಾತ್ರ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಆದರೆ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿಗಳು ತಮ್ಮ ಪರವಾಗಿ ಖಾಸಗಿ ವ್ಯಕ್ತಿಗಳನ್ನು ಕಳಿಸಿದ್ದಾರೆ ಎನ್ನಲಾಗಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಆಧರಿಸಿ ತಪ್ಪಿತಸ್ಥ ಯುವಕರ ಮೇಲೆ ದೂರು ದಾಖಲಿಸುವಂತೆ ಸಹಾಯಕ ಆಯುಕ್ತ, ದೇಗುಲದ ಕಾರ್ಯನಿರ್ವಹಣಧಿಕಾರಿ ಮಹೇಶ್​ ಸೂಚನೆ ನೀಡಿದ್ದಾರೆ.

ದೇಗುಲದಲ್ಲಿ ಕೇವಲ ಪೂಜೆಗೆ ಮಾತ್ರ ಅವಕಾಶ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬರು ದೇಗುಲದ ತಟ್ಟೆಯಲ್ಲಿ ಸಂಗ್ರವಾಗಿದ್ದ ಲಕ್ಷಾಂತರ ರೂಪಾಯಿ ಮೊತ್ತವನ್ನು ತಮ್ಮ ಚೀಲಕ್ಕೆ ಹಾಕಿಕೊಂಡು ಸಾಗಿಸುತ್ತಿದ್ದ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೆ ಇದುವರೆಗೂ ಈ ವ್ಯಕ್ತಿ ಮೇಲೂ ಕ್ರಮ ಕೈಗೊಂಡಿಲ್ಲ. ಇದರ ಮಧ್ಯೆ ಮತ್ತೊಂದು ಪ್ರಕರಣ ನಡೆದಿದೆ. ಕಂದಾಯ ಮತ್ತು ದೇಗುಲದ ಸಿಬ್ಬಂದಿ ಹೊರತುಪಡಿಸಿದರೆ ಬೇರೆ ಯಾವುದೇ ವ್ಯಕ್ತಿಗಳಿಗೆ ದೇವಸ್ಥಾನದ ಹಣ ಎಣಿಕೆಗೆ ಅವಕಾಶ ಇಲ್ಲ.

ಆದರೆ ಇಲಾಖೆಯ ಅಧಿಕಾರಿಗಳ ಕಣ್ತಪ್ಪಿಸಿ ಈ ಯುವಕರು ಬಂದಿದ್ದು ಹೇಗೆ, ಅಥವಾ ಅಧಿಕಾರಿಗಳೇ ಯುವಕರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆಯೇ ಎಂಬ ಅನುಮಾನ ವ್ಯಕ್ತಪವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇಗುಲದ ವ್ಯವಸ್ಥಾಪಕ ವೆಂಕಟೇಶ, ತಪ್ಪಿತಸ್ಥ ಯುವಕರ ಮೇಲೆ ದೂರು ದಾಖಲಿಸಲು ಸಹಾಯಕ ಆಯುಕ್ತರು ಸೂಚನೆ ನೀಡಿದ್ದಾರೆ. ಸೋಮವಾರ ನನಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ದೂರು ದಾಖಲಿಸಿಲ್ಲ ಎಂದರು.

ಇದನ್ನೂ ಓದಿ:ಗೋಕಾಕ್​ನಲ್ಲಿ ನಕಲಿ ನೋಟು ಜಾಲ ಪತ್ತೆ: ಐವರು ಆರೋಪಿಗಳ ಬಂಧನ - Fake Currency Notes

ABOUT THE AUTHOR

...view details