ಕರ್ನಾಟಕ

karnataka

ಸೆ.15 ರೊಳಗೆ ಉಡುಪಿ ನಗರ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಪೂರ್ಣ: ಕೋಟ ಶ್ರೀನಿವಾಸ್​ ಪೂಜಾರಿ - Kota Srinivas Poojary

By ETV Bharat Karnataka Team

Published : Jun 29, 2024, 8:50 PM IST

ಪ್ರಮಾ ಇದೇ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ ಕೋಟ ಶ್ರೀನಿವಾಸ್​ ಪೂಜಾರಿ ನಗರದ ಇಂದ್ರಾಳಿ ರೈಲ್ವೆ ಬ್ರಿಡ್ಜ್​ ಕಾಮಗಾರಿಯ ವೀಕ್ಷಿಸಿ, ಸೆಪ್ಟೆಂಬರ್ 15ರೊಳಗೆ ಇಂದ್ರಾಳಿ ರೈಲ್ವೆ ಬ್ರಿಡ್ಜ್​ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಕೋಟ ಶ್ರೀನಿವಾಸ್​ ಪೂಜಾರಿ
ಕೋಟ ಶ್ರೀನಿವಾಸ್​ ಪೂಜಾರಿ (ETV Bharat)

ಉಡುಪಿ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ ಕೋಟ ಶ್ರೀನಿವಾಸ್​ ಪೂಜಾರಿ ನಗರದ ಇಂದ್ರಾಳಿ ರೈಲ್ವೆ ಬ್ರಿಡ್ಜ್​ ಕಾಮಗಾರಿ ವೀಕ್ಷಣೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲಸ ಸ್ಥಗಿತವಾಗಿ ನಾಲ್ಕು ವರ್ಷವಾಗಿದೆ. ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ನಾನು ಭೇಟಿ ನೀಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದ್ದೇನೆ. ಜುಲೈ 2ರ ಒಳಗಾಗಿ ಮೆಸ್ಕಾಂನವರು ವಿದ್ಯುತ್ ಕಂಬಗಳನ್ನು ಶಿಫ್ಟ್ ಮಾಡುವುದಾಗಿ ಹೇಳಿದ್ದಾರೆ ಎಂದರು.

ಎರಡು ತಿಂಗಳ ಒಳಗಾಗಿ ಎಲ್ಲ ಕಾಮಗಾರಿಯನ್ನು ಮುಗಿಸುವ ಭರವಸೆ ಕೊಟ್ಟಿದ್ದಾರೆ. ಸೆಪ್ಟೆಂಬರ್ 15ರೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಸಹ ಅವರು ನೀಡಿದ್ದಾರೆ. ಮಳೆ ವಿಪರೀತವಾದರೆ 15 ದಿನ ವ್ಯತ್ಯಾಸ ಆಗಬಹುದು. ತಮ್ಮಿಂದ ಆಗಿರುವ ಪ್ರಮಾದವನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಕೆಲಸ ಪೂರ್ಣಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸನ್ನು ಮಾಡುತ್ತೇನೆ ಎಂದು ಹೇಳಿದರು

ಕಾಂಗ್ರೆಸ್​ನಲ್ಲಿ ಸಿಎಂ, ಡಿಸಿಎಂ ಬದಲಾವಣೆ ಗದ್ದಲದ ಬಗ್ಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಬದಲಾಗಬೇಕೆಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಈ ಬಗ್ಗೆ ಶಾಸಕರು, ಮಂತ್ರಿಗಳು ಧ್ವನಿ ಎತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ಬಿಟ್ಟು ಎಲ್ಲಾ ಶಾಸಕರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್ಸಿನ ಹಿರಿಯರೇ ವ್ಯಂಗ್ಯ ಮಾಡುತ್ತಿದ್ದಾರೆ. ಕರ್ನಾಟಕ ರಾಜಕಾರಣ ಎನ್ನುವುದು ಒಂದು ರೀತಿ ಗೊಂದಲಮಯವಾಗಿಬಿಟ್ಟಿದೆ. ಮಾತ್ರವಲ್ಲ ಜನಸಾಮನ್ಯರಿಗೆ ಆಡಳಿತ ನೀಡುವ ಬಿಗಿತನವನ್ನು ಸರ್ಕಾರ ಕಳೆದುಕೊಂಡಿದೆ. ಮಠಾಧೀಶರು ನೀಡುವ ಹೇಳಿಕೆಗಳು ಆಡಳಿತದ ಮೇಲೆ ಪರಿಣಾಮ ಬೀರಿದೆ. ಒಂದೇ ಒಂದು ಬಡವರ ಕಲ್ಯಾಣ ಯೋಜನೆಗಳು ಜಾರಿಯಾಗುತ್ತಿಲ್ಲ, ವಿದ್ಯಾರ್ಥಿಗಳಿಗೆ ಹಾಸ್ಟೆಲ್​ಗಳು ಸಿಗುತ್ತಿಲ್ಲ ಎಂಬ ದೂರು ಸಾರ್ವತ್ರಿಕವಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದ್ದಾರೆ. ಬಹಳ ದಿನಗಳ ಕಾಲ ಈ ಸರ್ಕಾರ ಮುಂದುವರಿಯುತ್ತೆ ಅನಿಸುತ್ತಿಲ್ಲ ಎಂದರು.

ವಾಲ್ಮೀಕಿ ನಿಗಮ ಹಗರಣ ವಿಚಾರವನ್ನು ಸಿಬಿಐಗೆ ಕೊಡಿ:ವಾಲ್ಮೀಕಿ ನಿಗಮದ ಹಗರಣ ಕುರಿತು ಹೋರಾಟ ಮಾಡಿದ್ದರಿಂದ ತನಿಖೆ ಆಗುತ್ತಿದೆ. ಈ ಸರ್ಕಾರದ್ದು ಆನೆ ಚರ್ಮ, ದಬ್ಬಾಳಿಕೆಯ ಮಾತುಗಳನಾಡುತ್ತಿದೆ. ಸರ್ಕಾರ ನಡೆಸುವ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ, ಈ ವಿಚಾರದಲ್ಲಿ ರಕ್ಷಣೆ ಮಾಡಲು ಸರ್ಕಾರ ಮುಂದಾಗಿದೆ ಎಂಬ ಅಭಿಪ್ರಾಯ ಇದೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ನಾವು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ:'ವಾರ್ನಿಂಗ್ ನಾನ್ ಕೇಳ್ತಿನೇನ್ರೀ': ಡಿಕೆಶಿ ಎಚ್ಚರಿಕೆಗೆ ಕೆ.ಎನ್​. ರಾಜಣ್ಣ ಡೋಂಟ್​ಕೇರ್​! - K N RAJANNA ON DCM WARNING

ABOUT THE AUTHOR

...view details