ಬೆಂಗಳೂರು:ಶ್ರಾವಣ ಮಾಸ ಬಂತೆಂದರೆ ಸಾಕು ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ನಾಳೆ ಶುಕ್ರವಾರ. ವರಮಹಾಲಕ್ಷ್ಮಿ ಹಬ್ಬ. ಈ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿ ಜೋರಾಗಿತ್ತು. ಹೂವು, ಹಣ್ಣುಗಳ ಬೆಲೆ ಗ್ರಾಹಕರ ಜೇಬಿಗೆ ಭಾರವಾಗಿತ್ತು.
ಆಷಾಢ ಮಾಸದಲ್ಲಿ ಯಾವುದೇ ಹಬ್ಬ, ಶುಭ ಸಮಾರಂಭಗಳು ಇರುವುದಿಲ್ಲ. ಹೀಗಾಗಿ ಕಳೆದೊಂದು ತಿಂಗಳಿನಿಂದ ಕಡಿಮೆಯಿದ್ದ ಹೂಗಳ ಬೆಲೆ ವಾರದಿಂದ ನಿಧಾನವಾಗಿ ಏರತೊಡಗಿತ್ತು. ಹಬ್ಬದ ಮುನ್ನಾದಿನವಾದ ಇಂದು ಕೆ.ಆರ್.ಮಾರುಕಟ್ಟೆ, ಜಯನಗರ, ಮಲ್ಲೇಶ್ವರಂ, ಚಿಕ್ಕಪೇಟೆ, ವಿಜಯನಗರ, ಗಾಂಧಿ ಬಜಾರ್ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಮಾವಿನ ಎಲೆ, ಬಾಳೆ ದಿಂಡು, ಲಕ್ಷ್ಮಿ ಮೂರ್ತಿ, ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿ ನಡೆಯಿತು. ಜನರು ಭಾರಿ ಪ್ರಮಾಣದಲ್ಲಿ ಆಗಮಿಸಿ ಹೂ, ಹಣ್ಣು ಹಾಗು ಪೂಜಾ ಪರಿಕರಗಳನ್ನು ಖರೀದಿಸುತ್ತಿದ್ದರು.
ಹಬ್ಬದ ಸಂಭ್ರಮದಲ್ಲಿರುವವರಿಗೆ ಬೆಲೆ ಏರಿಕೆ ಬಿಸಿ ಕೂಡಾ ತಟ್ಟಿದೆ. ಕಳೆದ ಕೆಲ ದಿನಗಳ ಹಿಂದೆ ಕೆ.ಜಿಗೆ 80 ರೂಪಾಯಿಗೆ ಮಾರಾಟವಾಗುತ್ತಿದ್ದ ಗುಲಾಬಿ ಇಂದು 200 ರೂಪಾಯಿ ತಲುಪಿದೆ. ಇನ್ನು, ಸೇವಂತಿಗೆ ಕೆಜಿಗೆ 250 ರೂಪಾಯಿ, ಚೆಂಡು ಹೂವು 250 ರೂಪಾಯಿ, ಕನಕಾಂಬರ 1,000 ರೂಪಾಯಿ ಇತ್ತು.
ಶುಕ್ರವಾರ ತಮ್ಮ ಮನೆಗಳಿಗೆ ಲಕ್ಷ್ಮಿಯನ್ನು ಬರಮಾಡಿಕೊಳ್ಳಲು ಹೆಂಗಳೆಯರ ಕಾತುರತೆ ಹೆಚ್ಚಾಗಿರುವುದು ಈ ಖರೀದಿಯಲ್ಲಿ ಕಾಣುಸುತ್ತಿತ್ತು. ಲಕ್ಷ್ಮಿಯ ಅಲಂಕಾರಿಕ ವಸ್ತುಗಳು, ಮನೆಯ ಬಾಗಿಲಿನ ತೋರಣ, ಬಾಳೆದಿಂಡು, ಹಣ್ಣು-ಹಂಪಲು, ಲಕ್ಷ್ಮಿ ವಿಗ್ರಹ, ತರಹೇವಾರಿ ತಿಂಡಿಗಳನ್ನು ತಯಾರಿಸಲು ವಿವಿಧ ಅಡುಗೆ ಸಾಮಗ್ರಿ ಮತ್ತು ಪೂಜಾ ಸಾಮಗ್ರಿಗಳ ಖರೀದಿ ಹೆಚ್ಚಾಗಿತ್ತು.
ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ಕನಕಾಂಬರ, ಸೇವಂತಿಗೆ, ಚೆಂಡು ಹೂ, ಸುಗಂಧರಾಜ, ಕಾಕಡ ಹೂವುಗಳನ್ನು ಬೆಳೆಯಲಾಗುತ್ತದೆ. ಬಿರು ಬೇಸಿಗೆಯಿಂದ ನೀರಿಲ್ಲದೆ ಒಣಗಿದ್ದ ಹೂವಿನ ತೋಟ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ನಳನಳಿಸಿದೆ. ಬೆಳೆಯೂ ಚೆನ್ನಾಗಿ ಬಂದಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವು ಬರುತ್ತಿದೆ. ಆದರೆ ಬೇಡಿಕೆ ಹೆಚ್ಚಾಗಿ ಬೆಲೆಯೂ ಏರಿಕೆಯಾಗಿದೆ.