ಮೈಸೂರು : "ನಿನ್ನೆ ಚಾಮುಂಡಿ ಬೆಟ್ಟದಲ್ಲಿ ಬಿದ್ದ ಬೆಂಕಿ ಮಾನವ ನಿರ್ಮಿತ. ಉದ್ದೇಶಪೂರ್ವಕವಾಗಿಯೇ ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅದೃಷ್ಟಶಾತ್ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ಅರಣ್ಯ ಇಲಾಖೆಯ ವಾಚರ್ ಕಣ್ಣಿಗೆ ಚಿರತೆ ಹಾಗೂ ಅದರ ಮರಿಗಳು ಬೆಂಕಿ ಬಿದ್ದ ತಕ್ಷಣ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಿರುವುದು ಕಂಡಿದೆ" ಎಂದು ಡಿಸಿಎಫ್ ಬಸವರಾಜ್ ತಿಳಿಸಿದರು.
ನಗರದ ಅರಣ್ಯ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಿನ್ನೆ ಗಾಳಿಯ ವೇಗ ಹಾಗೂ ಬಿಸಿಲಿನ ವಾತಾವರಣ ಹೆಚ್ಚಾಗಿತ್ತು. ಹೀಗಾಗಿ ಬೆಂಕಿ ನಂದಿಸಲು ಕಷ್ಟವಾಗಿದೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಆ ಸ್ಥಳಕ್ಕೆ ಹೋಗಲು ಕಷ್ಟವಾಯಿತು. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಹಾಕಿದ್ದು, ಸಂಜೆ ವೇಳೆಗೆ ಬೆಂಕಿ ಹತೋಟಿಗೆ ಬಂತು" ಎಂದರು.
"ನಿನ್ನೆ ರಾತ್ರಿ ವಾಚರ್ಗಳ ಮೂರು ತಂಡಗಳು ರಾತ್ರಿಯಿಡೀ ಚಾಮುಂಡಿಬೆಟ್ಟ ಅರಣ್ಯ ಪ್ರದೇಶಕ್ಕೆ ಕಾವಲಾಗಿದ್ದವು. ಬೆಳಗ್ಗೆ ಎಲ್ಲಾ ಕಡೆ ಬೆಂಕಿ ಹತೋಟಿಗೆ ಬಂದಿದೆ. ಚಾಮುಂಡಿಬೆಟ್ಟದ ಒಟ್ಟು 1516 ಎಕರೆ ಮೀಸಲು ಅರಣ್ಯ ಪ್ರದೇಶದಲ್ಲಿ ನಾಲ್ಕು ಕಡೆ ಬೆಟ್ಟ ಪ್ರವೇಶಿಸಲು ರಸ್ತೆ ಇದೆ. ಬೆಂಕಿಯ ಕೆನ್ನಾಲಿಗೆಗೆ ದೇವಿಕೆರೆ, ಗೊಲ್ಲಹಳ್ಳ ಭಾಗದಲ್ಲಿ 35 ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ. ದಯವಿಟ್ಟು ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ಚಾಮುಂಡಿಬೆಟ್ಟದ ಪ್ರದೇಶದಲ್ಲಿ ಬೆಂಕಿ ಕಿಡಿ ಹೊತ್ತಿಸಬೇಡಿ" ಎಂದು ಮನವಿ ಮಾಡಿದರು.
ಇಲ್ಲಿಯವರೆಗೆ ಎಷ್ಟು ಕಡೆ ಅನಾಹುತ : "ಇಲ್ಲಿಯವರೆಗೆ ಮೈಸೂರು ಜಿಲ್ಲೆಯಲ್ಲಿ 19 ಕಡೆ ಸಣ್ಣಪುಟ್ಟ ಕಾಡ್ಗಿಚ್ಚು ಘಟನೆಗಳು ಕಂಡು ಬಂದಿವೆ. ಟಿ.ನರಸೀಪುರದ ಉಕ್ಕಲಗೆರೆ ಬೆಟ್ಟ, ನಂಜನಗೂಡಿನ ಕವಲಂದೆ ಭಾಗ, ನಿನ್ನೆ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ ಅವಘಡವೇ ದೊಡ್ಡ ಬೆಂಕಿ ಅನಾಹುತವಾಗಿದೆ" ಎಂದು ಡಿಸಿಎಫ್ ಬಸವರಾಜ್ ಮಾಹಿತಿ ನೀಡಿದರು.