ಚಾಮರಾಜನಗರ : ಕಳೆದ ಮೇ 8ರಂದು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಲ್ಲಿ ಸೆರೆ ಹಿಡಿದಿದ್ದ ಆನೆಯ ದಂತ ಕತ್ತರಿಸಿ ಕಾಡಿಗೆ ಬಿಟ್ಟ ಪ್ರಯೋಗ ಯಶಸ್ಸು ಕಂಡಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ರೈತರ ಜಮೀನಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕಾಡಾನೆಗೆ ಬಂಡೀಪುರ ಅರಣ್ಯ ಇಲಾಖೆಯು ಕೂಡು ದಂತವನ್ನು ಕತ್ತರಿಸಿ ಆನೆಗೆ ಯಶಸ್ವಿ ಚಿಕಿತ್ಸೆ ಮಾಡಿದೆ. ಈ ಮೂಲಕ ಕಾಡಾನೆಗೆ ನೈಸರ್ಗಿಕವಾಗಿ ಆಹಾರ ಸೇವನೆಗೆ ಅನುವು ಮಾಡಿಕೊಟ್ಟಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಸುತ್ತಮುತ್ತಲಿನ ರೈತರ ಜಮೀನಿನ ಫಸಲು ತಿಂದು ಹಾಳು ಮಾಡುತ್ತಿದ್ದ ಕೂಡು ದಂತ ಕಾಡಾನೆಯ ಹಾವಳಿಗೆ ರೈತರು ಆಕ್ರೋಶಗೊಂಡಿದ್ದರು. ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಮೇ 8 ರಂದು ಕಾಡಾನೆ ಸೆರೆ ಹಿಡಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯಕ್ಕೆ ಬಿಟ್ಟಿದ್ದರು. ಕಾಡಿಗೆ ಬಿಡುವ ಮುನ್ನ ಆನೆ ದಂತಕ್ಕೆ ಕತ್ತರಿ ಪ್ರಯೋಗ ಮಾಡಲಾಗಿತ್ತು.
ಬಂಡೀಪುರ ಸಿಎಫ್ಒ ಪ್ರಭಾಕರನ್ ಅವರು ಸೆರೆಹಿಡಿದ ಕಾಡಾನೆ ನಾಡಿಗೇಕೆ ಬಂದು ರೈತರ ಜಮೀನಿನ ಫಸಲು ತಿನ್ನುತ್ತಿತ್ತು ಎಂದು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ ಬಳಿಕ, ಹಂಗಳ ಸುತ್ತಮುತ್ತ ದಾಂಧಲೆ ಮಾಡುತ್ತಿದ್ದ ಕಾಡಾನೆಗೆ ಕೂಡು ದಂತ ಕಾರಣ ಎಂದು ಖಚಿತಪಡಿಸಿಕೊಂಡಿದ್ದರು.
ಮೇಲಾಧಿಕಾರಿಗಳ ಅನುಮತಿ ಪಡೆದು ಸೆರೆ ಹಿಡಿದ ಆನೆಯ ಕೂಡು ದಂತವನ್ನು ಸ್ವಲ್ಪ ತುಂಡು ಮಾಡಿದ ಬಳಿಕ, ಕಾಡಿಗೆ ಬಿಡಲಾಗಿದೆ. ಕಾಡಿನಿಂದ ನಾಡಿಗೆ ಬಂದು ಆನೆ ರೈತರ ಫಸಲು ನಾಶ ಮಾಡದಂತೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಇದೇ ಮೊದಲ ಬಾರಿಗೆ ಈ ರೀತಿ ಪ್ರಯೋಗ ನಡೆಸುವ ಮೂಲಕ ಬಂಡೀಪುರ ಇತಿಹಾಸ ಬರೆದಿದೆ.
ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ದಂತ; ಸೆರೆ ಹಿಡಿದಿದ್ದ ಕಾಡಾನೆಗೆ ಎರಡು ದಂತ ಅಡ್ಡಾದಿಡ್ಡಿಯಾಗಿ ಬೆಳೆದು ಒಂದಕ್ಕೊಂದು ಕೂಡಿಕೊಂಡಿದ್ದ ಕಾರಣ, ಸೋಂಡಿಲನ್ನು ಮೇಲೆತ್ತಲು ಆಗುತ್ತಿರಲಿಲ್ಲ. ಕಾಡಲ್ಲಿ ಬೆಳೆದ ಮರದ ಸೊಪ್ಪು, ಹಣ್ಣು ತಿನ್ನಲು ಆಗುತ್ತಿರಲಿಲ್ಲ. ದೇಹವನ್ನು ನೀರು, ಮಣ್ಣಿನಿಂದ ತಂಪು ಮಾಡಿಕೊಳ್ಳಲು ಆಗುತ್ತಿರಲಿಲ್ಲ.
ಕೂಡು ದಂತಗಳ ಒಳಗಿಂದ ಆನೆ ಸೋಂಡಿಲು ಮೇಲೆತ್ತಲು ಆಗದೆ, ಕಾಡಿನ ಆಹಾರ ತಿನ್ನಲು ಆಗದ ಕಾರಣ ಕಾಡಾನೆ ಸುಲಭವಾಗಿ ಆಹಾರ ಸೇವನೆಗೆ ಕಾಡಂಚಿನ ಗ್ರಾಮದ ರೈತರ ಜಮೀನಿನಲ್ಲಿ ಬೆಳೆದ ಫಸಲು ತಿನ್ನಲು ಶುರು ಮಾಡಿತ್ತು.
ಕೆಲ ದಿನಗಳ ಕಾಲ ನಿಗಾ- ಸಿಎಫ್ಒ; ಜಮೀನುಗಳಿಗೆ ದಾಳಿ ಮಾಡಿ ನೆಲ ಮಟ್ಟದಲ್ಲಿ ಬೆಳೆದ ಕಬ್ಬು, ಬಾಳೆ ಗಿಡ, ಟೊಮೆಟೋ ಮತ್ತಿತರ ತರಕಾರಿ ಸುಲಭವಾಗಿ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದ ಕಾಡಾನೆಯು, ಇದನ್ನೇ ನಿತ್ಯ ಅಭ್ಯಾಸ ಮಾಡಿಕೊಂಡಿತ್ತು. ಇದರಿಂದ ರೈತರು ಹಾಗು ಅರಣ್ಯ ಇಲಾಖೆಗೆ ತಲೆನೋವಾಗಿತ್ತು. ಈಗ ಸದ್ಯ ಆನೆಗೆ ದಂತ ಕತ್ತರಿಸಿದ ಬಳಿಕ ಕಾಡಲ್ಲಿ ಆರೋಗ್ಯದಿಂದಿದ್ದು, ನೈಸರ್ಗಿಕವಾಗಿ ಸಿಗುವ ಆಹಾರ ಸೇವಿಸುತ್ತಿದೆ. ಆನೆಯ ಮೇಲೆ ಇನ್ನೂ ಕೆಲ ದಿನಗಳ ಕಾಲ ನಿಗಾ ಇಡಲಿದ್ದೇವೆ ಎಂದು ಬಂಡೀಪುರ ಸಿಎಫ್ಒ ಪ್ರಭಾಕರನ್ ತಿಳಿಸಿದ್ದಾರೆ.
ಇದನ್ನೂ ಓದಿ :ಆಹಾರ ಅರಸಿ ಬಂದು ಪ್ಲಾಸ್ಟಿಕ್ ರಾಶಿಯಲ್ಲಿ ಹೆಕ್ಕಿ-ಹೆಕ್ಕಿ ತ್ಯಾಜ್ಯ ತಿಂದ ಕಾಡಾನೆ: ವಿಡಿಯೋ - Elephant Eating Garbage