ಮೈಸೂರು:ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾದ ಬಾಲರಾಮನ ಮೂರ್ತಿಗೆ ಶಿಲೆಯನ್ನು ನೀಡಿದ ಮೈಸೂರಿನ ಜಯಪುರ ಹೋಬಳಿಯ ಹಾರೋಹಳ್ಳಿ ಜಮೀನಿನಲ್ಲಿ ಕೊನೆಗೂ ಶ್ರೀರಾಮನ ದೇಗುಲ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ.
ಈ ಜಮೀನಿನಲ್ಲಿ ಶಿಲಾನ್ಯಾಸ ನೆರವೇರಿದ ವರ್ಷದ ಬಳಿಕ ರಾಮ ದೇಗುಲ ನಿರ್ಮಾಣಕ್ಕೆ ಚಾಲನೆ ಸಿಗಲಿದ್ದು, ದಕ್ಷಿಣದ ಅಯೋಧ್ಯೆಯಾಗಿ ಪರಿವರ್ತನೆಯಾಗಲಿದೆ. ಶಿಲೆ ನೀಡಿದ ಭೂಮಿಯ ಮಾಲೀಕ ರಾಮದಾಸ್ ಕುಟುಂಬದವರು ತಾವೇ ಗುಡಿ ನಿರ್ಮಾಣ ಮಾಡಲು ಸಕಲ ಸಿದ್ಧತೆ ನಡೆಸಿದ್ದು, ಇಂದು (ಜ.22ರಂದು) ಭೂಮಿ ಪೂಜೆ ನೆರವೇರಲಿದೆ. ಈಗಾಗಲೇ ಕುಟುಂಬಸ್ಥರು ಜಮೀನು ಹದ ಮಾಡಿ ದೇಗುಲ ನಿರ್ಮಾಣ ಕಾರ್ಯಕ್ಕೆ ಸಕಲ ಸಿದ್ಧತೆ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಜಮೀನಿನಲ್ಲಿ ಸಚ್ಛತಾ ಕಾರ್ಯ ನಡೆಸುವುದರೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ಜಮೀನಿನ ಮಣ್ಣನ್ನು ಮಟ್ಟ ಮಾಡಲಾಗಿದೆ. ಜತೆಗೆ ಭೂಮಿಯಲ್ಲಿ ಹುದುಗಿದ್ದ ರಾಮನ ಶಿಲೆ ಸಿಕ್ಕ ಬಂಡೆಯೊಂದಿಗೆ ಇತರ ಬಂಡೆಗಳನ್ನು ತೆರವುಗೊಳಿಸಲಾಗಿದೆ. ಗ್ರಾಮದಿಂದ ಜಮೀನಿಗೆ ರಸ್ತೆ ಸಂಪರ್ಕವನ್ನು ಸಹ ಮಾಡಲಾಗಿದೆ.
ದೇಗುಲ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಜತೆಗೆ ಅರುಣ್ ಯೋಗಿ ಅವರಿಂದಲೂ ಅಯೋಧ್ಯೆಯ ಮಾದರಿಯಲ್ಲಿಯೇ ಇಲ್ಲಿಯೂ ಶ್ರೀರಾಮನ ಮೂರ್ತಿ ಕೆತ್ತನೆ ಮಾಡಿಸಲು ಚರ್ಚೆಯಾಗಿತ್ತು. ಶಿಲೆ ಸಿಕ್ಕ ಜಾಗದಲ್ಲಿ ದೇಗುಲ ನಿರ್ಮಾಣಕ್ಕೆ ವರ್ಷದ ಹಿಂದೆಯೇ ಭೂಮಿಪೂಜೆ ನೆರವೇರಿಸಲಾಗಿದ್ದು, ಒಂದು ವರ್ಷದಿಂದ ಯಾವುದೇ ಪ್ರಗತಿಯಾಗದ ಕಾರಣ ನಾವೇ ನಮ್ಮ ಶಕ್ತಾನುಸಾರ ದೇಗುಲ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ. ಜ.22ರಂದು ದೇಗುಲ ನಿರ್ಮಾಣಕ್ಕೆ ಚಾಲನೆ ನೀಡುತ್ತಿದ್ದೇವೆ. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಭೂ ಮಾಲೀಕ ರಾಮದಾಸ್ ಅವರ ಪುತ್ರ ರಂಗಸ್ವಾಮಿ.
ದೇಗುಲ ನಿರ್ಮಾಣಕ್ಕೆ ಚಾಲನೆ ನೀಡುವ ಮುನ್ನ ಶ್ರೀರಾಮ ವಿಗ್ರಹಕ್ಕೆ ಶಿಲೆ ಸಿಕ್ಕಿದ ಬಂಡೆಯಲ್ಲಿ ಶ್ರೀರಾಮನ ತೈಲಚಿತ್ರ ಮತ್ತು ಮತ್ತೊಂದು ಬಂಡೆ ಮೇಲೆ ಹನುಮನ ವರ್ಣಚಿತ್ರವನ್ನು ಸಹ ಬರೆಸಲಾಗುತ್ತಿದೆ. ವಿಶೇಷ ಪೂಜೆ ಸಲ್ಲಿಸಲು ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಶಿಲೆ ಸಿಕ್ಕ ಜಾಗದಲ್ಲಿ ಗರ್ಭ ಗುಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ರಂಗಸ್ವಾಮಿ ಮಾಹಿತಿ ನೀಡಿದರು.