ಬೆಂಗಳೂರು:ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಟೆಕ್ಕಿ ಅತುಲ್ ಶುಭಾಷ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಆತನ ಪತ್ನಿ ನಿಖಿತಾ ಸಿಂಘಾನಿಯಾ ಮತ್ತವರ ತಾಯಿ ಹಾಗೂ ಸಹೋದರ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.
ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಸಿಂಘಾನಿಯಾ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರು ಪ್ರಕರಣ ಹಿಂಪಡೆಯುವುದಾಗಿ ಮೆಮೋ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಆದರೆ, ಪ್ರಕರಣದ ಮತ್ತೋರ್ವ ಆರೋಪಿ ನಿಖಿತಾ ಸಿಂಘಾನಿಯಾ ಅವರ ಚಿಕ್ಕಪ್ಪ ಸುಶೀಲ್ ಕುಮಾರ್ ಸಿಂಘಾನಿಯಾ ಸಲ್ಲಿಸಿದ್ದ ಅರ್ಜಿಯ ಸಂಬಂಧ ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ಗೆ (ದೂರುದಾರ) ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆವರೆಗೂ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ಫೆಬ್ರುವರಿ 26ಕ್ಕೆ ಮುಂದೂಡಿದೆ.
ನಿಖಿತಾ ಸಿಂಘಾನಿಯಾ ಅವರ ಚಿಕ್ಕಪ್ಪ ಸುಶೀಲ್ ಕುಮಾರ್ ಪರ ವಕೀಲರು, ''ಅರ್ಜಿದಾರರಿಗೆ 70 ವರ್ಷ ವಯಸ್ಸಾಗಿದೆ. ಡೆತ್ ನೋಟ್ನಲ್ಲಿ ನಮ್ಮ ಕಕ್ಷಿದಾರರ ಹೆಸರಿದೆ ಎಂಬ ಕಾರಣಕ್ಕೆ ದೂರಿನಲ್ಲಿ ಅವರ ಹೆಸರನ್ನು ಸೇರಿಸಿರುವುದು ಸಾಮಾನ್ಯವಾಗಿದೆ. ಆದರೆ, ಅರ್ಜಿದಾರರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಎಲ್ಲ ಆರೋಪಗಳು ಮೃತರ ಪತ್ನಿ ಮತ್ತು ಕುಟುಂಬದವರ ವಿರುದ್ಧವಿದೆ'' ಎಂದು ಪೀಠಕ್ಕೆ ವಿವರಿಸಿದರು.